Monday, 9 February 2015

ವಿವಾಹ ಮಂಗಳ

ವಿವಾಹ ಮಂಗಳ


ನಿತ್ಯ ವರಪರೀಕ್ಷೆಯಲಿ
ವರನಿಗೇ ಸೋಲು
“ನೀವು ತಂದ ಹಾಲು
ಹೆಪ್ಪಿಟ್ಟರೂ ಮೊಸರಾಗದು
ತರಕಾರಿಯೋ..ಅಯ್ಯೋ
ಬಲಿತ ಹುರುಳಿ, ಬೆಂಡು ಸವತೆ
ಕನರು ಬದನೆ, ಕಹಿ ಹೀರೆ.
ಕೊಳೆತ ಕಿತ್ತಳೆ, ದ್ರಾಕ್ಷಿ ಹುಳಿ.
ಸೀರೆ?
ಒಂದಕ್ಕೆರಡು ಕೊಟ್ಟಿರಲ್ಲ!
ಬಣ್ಣ ಪಸಂದಿಲ್ಲ
ಇದು ಹಾಗೇ ಇಡಿ
ಕೊಟ್ಟರಾಯಿತು ಯಾರಿಗಾದರೂ
ಉಡುಗೊರೆಯಾಗಿ.
ಹೂವು ಮಾರಿಲ್ಲ
ಮಾರುವವಳ ಮಾರೆ
ನೋಡಿ ತಂದಿರೇನು?
ಬಾಡಲೆರಡೇ ಘಳಿಗೆ
ಮಲ್ಲಿಗೆ, ಮೊಗ.”


ಪರೀಕ್ಷೆಯೇ ಇಲ್ಲದ
ವಧುವಿಗೇ ನಿತ್ಯ ಜಯ.
ಇವಳು ಬೆರೆಸಿದ ಕಾಫಿಗೆ
ಮಯ್ಯನೂ ಕೈಚೆಲ್ಲಬೇಕು
ಉಪ್ಪಿಟ್ಟಿನ ಘಮಲಿಗೆ
ಎಂಟಿಆರ್ ಮುಲುಗಬೇಕು.
ಮಕ್ಕಳಿಗೆಲ್ಲ ಇವಳ
ಕಾವಲಿಯೇ ವಿದ್ಯಾರ್ಥಿಭವನ
ಇವಳು ತಂದ ಬೆಂಡೆ
ಪರ್ಫೆಕ್ಟ್ ಲೇಡೀಸ್ ಫಿಂಗರ್.
ಸೀರೆ?
ಇವಳು ತಂದದ್ದೂ ಒಂದಕ್ಕೆರಡೇ
ಒಂದಕ್ಕೆ ಮತ್ತೊಂದು ಫ್ರೀ!
ಇರಲಿ ಎರಡೂ ಇವಳಿಗೆ
ಒಂದು ರಾಮ ಗ್ರೀನ್
ಇನ್ನೊಂದು ಪ್ಯಾರೆಟ್ ಗ್ರೀನ್
ಹೂವು, ಕೊಸರು ಸೇರಿ
ದೇವರಿಗೆ ಮುಡಿಸಿ
ಇವಳಿಗೂ ಮಿಗುವಷ್ಟು.


ವಿವಾಹ ಮಂಟಪದ
ಗದ್ದಲವಡಗಿದ ಬಳಿಕವಷ್ಟೆ
ಲಜ್ಜೆಯಾರಂಭ ಸಜ್ಜೆಮನೆಯಲಿ
ನಿತ್ಯವಸಂತದ ತಲ್ಪದಲಿ
ಬೆದೆಯ ನವಿಲಿನ ಕೇಕೆ
ಎಲ್ಲ ತರದೂದುಗಳಿಗೆ
ತುಟಿಮೀರಿದ ಮೌನಬೆಸುಗೆ
ಬೆದಕಾಟದುಸಿರುಗಳ
ತಾಳ ಲಯ ನಾಟ್ಯಕ್ಕೆ
ಸೃಜನತೆಯ ಸಾಕ್ಷಿ.
ಕಾಣದ ಅರುಂಧತಿಯ
ತೋರಿದವಗೆ
ರತಿಯ ಉನ್ಮಾದದ
ಕನವರಿಕೆ
ಬೆಳಗಿನ ಕಹಳೆಯಲಿ
ಜೀವದಾಕಳಿಕೆ
ದಾಟುವಲ್ಲೆಲ್ಲ ಎಚ್ಚರಿಕೆ
ನಾತಿ ಚರಾಮಿ.