Sunday, 7 December 2014

ಭಾಗ್ಯದ ಸಿದ್ರಾಮಯ್ಯ ಓಗಿ ಬಾ ನನ್ ತವರೀಗೆ....

“ ಅಣ್ಣಾ! ”
“ ಅಯ್ಯೋ ಸಿಂಗ್ರಿ...ಎಲ್ಲಿ ಹಾಳಾಗಿ ಹೋಗಿದ್ಯೋ? ಎಷ್ಟೋ ದಿನ ಆಯ್ತಲ್ಲೋ ನಿನ್ನ ನೋಡಿ! ”
“ ದಿಲ್ಲಿಗೆ ಓಗಿದ್ದೆ ಕಣಣ್ಣ ”
“ ಎಲಾ ಇವ್ನ, ದಿಲ್ಲಿಗಾ? ಏನು ನಿನ್ನ ಮಂತ್ರಿ ಮಾಡ್ತೀನಿ ಅಂತ ಕರೆದಿದ್ರೇನ್ಲಾ ಮೋದಿ? ”
“ ಓಹೊಹೋ ಏನು ದಿಲ್ಲಿ ಎಲ್ಲ ಅವರ್ದೇನೆಯಾ? ಈಗ ಪದುಮನಾಭ ನಗ್ರದಾಗೆ ಮಾಜಿ ಪ್ರಮ, ಮುಮ ಬುಟ್ಟು ಯಾರೂ ಇಲ್ವೇನಣ್ಣ? ”
“ ಅವ್ರೆ ಅವ್ರೆ... ನೀನು ಭೋ ಬುದ್ವಂತ ಆಗ್ಬುಟ್ಟೆ ಬುಡ್ಲ....ಅದ್ಸರಿ ದಿಲ್ಲಿಗ್ಯಾಕ್ ಓಗಿದ್ದೆ? ”
“ ಅಂಕೇಳು ಮತ್ತೆ, ಯಾವ್ದೋ ವ್ಯಾಜ್ಯ ಇತ್ತು, ಸುಪ್ರೀಂ ಕೋಲ್ಟ್ಗೆ ಓಗಿದ್ದೆ. ”
“ ಹೋ ಗೊತ್ತಾತು ಬುಡು. ಅದು ನಿನ್ ಮಗಳ ಕಾಲಕ್ಕೆ ಮುಗೀತದೆ ”
“ ಏನ್ ಮಾಡೋದಣ್ಣ ನಮ್ ನ್ಯಾಯಾಲಯ್ಗೋಳೆ ಅಂಗೆ. ಈಗ ರಾಜಕೀಯ್ದೋರೆಲ್ಲ ಹೈಕೋಲ್ಟಾಗ್ ಸೋತ್ರು ಸುಪ್ರೀಂನಾಗೆ ಸ್ಟೇನೋ ಬೈಲೋ ತಗತಾರೆ....ಅದು ನ್ಯಾಯಲಯದ ಕ್ರಮ. ಮತ್ತೆ ಹೀರಿಂಗು ಪೀರಿಂಗು ಆದ್ಮೇಲೆ ಸಿಕ್ಸೆ ಆಗೋದು.”
“ ಅದ್ಸರಿ ಏನೇನ್ ನೋಡ್ದೆ ದಿಲ್ಲಿನಾಗೆ? ”
“ ಅವೇ ಸಮಾಧಿಗೋಳು....ಬಣ್ ಬಣ್ದ್ ಬಿಲ್ಡಿಂಗು. ಎಂಡ್ರಿಗೆ ಮಕ್ಳಿಗೆ ಒಂದಿಷ್ಟು ಬಟ್ಟೆ ತಂದೆ. ನಿಮ್ ಮಗೀಗೂ ಒಂದು ಪ್ಯಾಂಟು, ಟಾಪು ತಂದಿದೀನಿ ”
“ ಹೂಂ ಕಣಪ್ಪ. ಮಗಾನೇಯ ಅದು. ಆಗ್ಲೆ ಪಿಯುಸಿ ಓಯ್ತಾ ಅದೆ. ಪ್ಯಾಂಟ್ ತಂದಿದೀಯ?....ಅಲ್ಲಲೇ ಅವರ್ ಕಾಲೇಜ್ನಾಗೆ ಪ್ಯಾಂಟ್ ಇಕ್ಕಳಾಕೆ ಬುಡಲ್ವಲ್ಲೋ! ”
“ ಅದ್ಯಾವ್ ಕಾಲೇಜು ಅಂತ ಸೇರ್ಸಿದ್ಯೋ ನೀನು....ಓಗ್ಲಿ ಬುಡು ಇಂಗೇ ಎಲ್ಲಾರ ಓಡಾಡಕ್ ಆಯ್ತದೆ. ಮತ್ತೆ ಇಲ್ಲೇನಣ್ಣ ಹಲ್ಕಟ್ ರಾಜ್ಯ ಆಗೋಗದೆ”
“ ಯಾಕೋ ತಲೆಗಿಲೆ ಕೆಟ್ಟದೇನೋ? ”
“ ಏನೋ ಬಿಟ್ಟಿಯಾಗಿ ದಂತ ಭಾಗ್ಯ ಯೋಜನೆ ಮಾಡ್ತಾವ್ರಂತಲ್ಲಣ್ಣ....ಅದೇ ಒಂದ್ರೂಪಾಯಿ ಅಕ್ಕಿ ಒಳ್ಗೆ ಕಲ್ಲು-ಪಲ್ಲು ಇದ್ದು ಹಲ್ಲು ಮುರ್ದೋದ್ರೆ ದಂತಭಾಗ್ಯ, ಆಮೇಲೆ ಹಲ್ಲುನೋವು ಮರೆಯಾಕೆ ಮದ್ಯಭಾಗ್ಯ...”
“ ನಿಂದು ಯಾಕೊ ಅತಿಯಾಯ್ತು ಕಣ್ಲಾ....ಏನೋ ಪಾಪ ಮುದುಕ್ರು ಸೆಂದಾಕ್ ಕಾಣ್ಲಿ ಅಂತ ಮಾಡುದ್ರೆ, ಅನ್ನಗಿನ್ನ ಅಗಿದು ತಿನ್ಲಿ ಅಂತ ಕೊಟ್ರೆ ಇಂಗೆಲ್ಲ ಅಂತಾರೇನ್ಲಾ? ”
“ ಓಗ್ಲಿ ಬುಡಣ್ಣ. ಒಂದ್ ಪದ ಏಳ್ತೀನಿ ಕೇಳ್ತೀಯಾ? ”
“ ಪರವಾಗಿಲ್ವೆ ಕವೀನೂ ಆಗ್ಬುಟ್ಟೆ ಅನ್ನಪ್ಪಾ ಸಿಂಗ್ರಿ....”
“ ಮತ್ತೆ ಇವತ್ತು ಫೇಸ್ಬುಕ್ಕಾಗೆ ಯಾಪಾಟಿ ಕವಿಗಳು ಅಂದ್ರೆ ಅಲ್ಲಿ ಕವಿತೆಗೊಳ ಟ್ರಾಫಿಕ್ ಜಾಮ್ ಆಗೋಗೈತೆ...ಅಂಗೇ ನಂದೂ ಒಂದ್ ಪದ ಬುಡ್ತೀನಿ ಕೇಳು...

“ ಭಾಗ್ಯದ ಸಿದ್ರಾಮಯ್ಯ ಓಗಿ ಬಾ ನನ್ ತವರೀಗೆ....

ನಿನ್ನ ತವರೂರ ನಾನೇನ ಬಲ್ಲೆ, ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ...ತೋರಿಸು ಬಾರೇ ತವರೂರ...

ರಿಯಲ್ ಎಸ್ಟೇಟ್ ಎಡಕ್ಕೆ ಬೀಡು, ರಿಯಲ್ ಎಸ್ಟೇಟ್ ಬಲಕ್ಕೆ ಬೀಡು, ನಟ್ಟ ನಡುವೇಲಿ ನೀ ಹೋಗು ಸಿದ್ರಾಮಯ್ಯ ಅಲ್ಲಿಹುದೆನ್ನಾ ತವರೂರು....

ಭಾಗ್ಯದ ಸಿದ್ರಾಮಯ್ಯ ಓಗಿ ಬಾ ನನ್ ತವರೀಗೆ....

ಆಶ್ರಯದ ಮನೆ ಕಾಣೋ, ತಗಡಿನ ಕದ ಕಾಣೋ ಬಡಿದಾಡವೆರಡು ಹಂದಿ ಕಾಣೋ..ಅಲ್ಲಿಹುದೆನ್ನಾ ತವರೂರು....

ಭಾಗ್ಯದ ಸಿದ್ರಾಮಯ್ಯ ಓಗಿ ಬಾ ನನ್ ತವರೀಗೆ....

ಊರಾಚೆ ಹಟ್ಟೀಲಿ, ಹರಿದಿರೋ ಶ್ಯಾಲೇಲಿ, ಕಟ್ಟಕಡೆ ಕಲ್ಲ ಚಪ್ಪಡಿಗೆ ಬೆರಣಿ ತಟ್ತವ್ಳೆ, ಬೆರಣಿಯ ತಟ್ತವ್ಳೆ..ಅವ್ಳೆ ಕಣೋ ನನ್ನ ಹಡೆದವ್ವ...

ಭಾಗ್ಯದ ಸಿದ್ರಾಮಯ್ಯ ಓಗಿ ಬಾ ನನ್ ತವರೀಗೆ....

ಪಾಕೀಟ್ ಸಾರಾಯಿ, ಗಣೇಸ ಬೀಡಿ ಹಡೆದವ್ಗೆ ಬಲು ಆಸೆ ಸಿದ್ರಾಮಯ್ಯ, ಕೊ೦ಡ್ ಹೋಗೊ ನನ್ನ ತವರೀಗೇ...

ಭಾಗ್ಯದ ಸಿದ್ರಾಮಯ್ಯ ಓಗಿ ಬಾ ನನ್ ತವರೀಗೆ....

ನಿನ್ನ ತವರೂರ ನಾನೇನ ಬಲ್ಲೆನು, ಹೊತ್ತಾಯ್ತು ಎನಗೆ, ಟೇಮಾಯ್ತು ಎಲೆ ಹೆಣ್ಣೆ, ಹೋಗಿ ಬರ್ತೀನಿ ನನ್ ದಿಲ್ಲೀಗೆ .”
...................................
“ ಯಾಕಣ್ಣ, ಕಣ್ಣಾಗ್ ನೀರು?”
“ ಊರಿನ್ ನೆನಪಾಯ್ತು ಕಣೋ. ಎಲ್ಡು ಸೀನೀರಿನ್ ಬಾವಿ ಇದ್ದೊ ಈಗ ಬಾವಿಗುಳೆಲ್ಲ ಬತ್ತೋಗಿ...ರಾಜಕೀಯ ಬಂದು ಊರೆಲ್ಲ ಏನೇನೋ ಆಗೋಗದೆ. ನೀನೇಳದ್ ನಿಜ ಕಣೋ ಇಲ್ಲಿ ಕುಂತು ಕೋಟಿಗಟ್ಲೆ ಖರ್ಚಲ್ಲಿ ಬಂಗ್ಲೆ ನವೀಕರಣ ಮಾಡ್ಕೋಳೋರ್ಗೆ ಬೆರಣಿ ತಟ್ಟೋರ ಬವಣೆ ಅರ್ಥ ಆಗಲ್ಲ ಕಣ್ಲಾ....ತುಂಬಾ ಎಮೋಷನಲ್ ಮಾಡ್ಬುಟ್ಟೆ ಕಣ್ಲಾ ನೀನು.”
“ ಈಗ ನಾವ್ ಮಾಡ್ಬೋದಾದ್ದು ಒಂದೇ ಕೆಲ್ಸ ಕಣಣ್ಣ.”
“ ಏನ್ ಹೇಳೋ ಸಿಂಗ್ರಿ ಮಾಡೇಬುಡಾನ...”
“ ಒಳ್ಳೆ ಸ್ಟ್ರಾಂಗ್ ಕಾಫಿ ಕುಡಿಯಾದು! ...”
“ ಥೂ..ಹಲ್ಕ ನನ್ಮಗ್ನೆ....ಇವಳೇ ನೋಡೂ ಸಿಂಗ್ರಿ ಬಂದಿದಾನೆ...ಎರಡು ಕಾಫಿ ಮಾಡ್ಕೊಡು ”
“ ಆಗ್ಲೆ ಏನೋ ಬೋಂಡ ವಾಸ್ನೆ ಬಂತು. ಅಂಗೆ ಅದೂ ಬಿಸಿಯಾಗ್ ಎಳ್ಡ್ ಪ್ಲೇಟ್ ಬರ್ಲಕ್ಕೋ....”

Thursday, 4 December 2014

ಹುಟ್ಟಿದ ದಿನಾಂಕ



ನನ್ನ ಜನ್ಮದಿನಾಂಕ ಮರೆಯೆ
ಪ್ರತಿ ಅರ್ಜಿಯಲ್ಲೂ ತಪ್ಪದ ಕಲಮು
ಅಭ್ಯಾಸಬಲ, ನೆನಪಿನ ಬಾಲದ ಬುಡ
ಆದರೂ ಬರೆವಾಗ ದಿಗಿಲು, ಏಕೆಂದರೆ
ನಾನೂ ಗಾಂಧಿಭಾವಬೀಜದ ಬಿಂದು
ಸತ್ಯವಾಕ್ಯಕೆ ತಪ್ಪಿನಡೆದರೆ ಮೆಚ್ಚನಾ ಪರಮಾತ್ಮನು
ಅರ್ಜಿಯ ಕೊನೆಯಲ್ಲಿ ಬರೆದದ್ದೆಲ್ಲ
ಸತ್ಯ ಎಂಬ ಹರಿಶ್ಚಂದ್ರನ ಷರಾ

ಕೈ ನಡುಗುತ್ತದೆ, ಮೈ ಬೆವರುತ್ತದೆ
ನಾ ಹುಟ್ಟಿದ್ದು ಯಾವಾಗ?
ಅಮ್ಮ ಅಪ್ಪನನ್ನು ಅಪ್ಪಿಕೊಂಡಾಗಲೇ?
ಅಮ್ಮನ ಮುಟ್ಟು ನಿಂತಾಗಲೇ?
ಅಥವಾ ಅಪ್ಪನ ಅರ್ಧಹನಿಯಾಗಿ ಚಿಮ್ಮಿದಾಗಲೇ?
ಅಥವಾ ಅವನ ರಕ್ತ ರೇತಸ್ಸಾದಗಲೇ?
ನಾನು ಒಳಹೋದ ಘಳಿಗೆಯೋ
ಹೊರಬಂದ ಘಳಿಗೆಯೋ- ಯಾವುದು
ನಾನು ಹುಟ್ಟಿದ ದಿನ ಘಳಿಗೆ?

ಅಮ್ಮ ಎದೆಹಾಲು ನಿಲ್ಲಿಸಿದ ದಿನ
ಅಪ್ಪ-ಅಮ್ಮ ನಡುವಿನಿಂದ ದಬ್ಬಿ
ನಡುಮನೆಯಲ್ಲಿ ನಿದ್ದೆಗೆ ಪಕ್ಕಾದ ದಿನ
ಸಂತಾನೋತ್ಪತ್ತಿ ಪಾಠ ಕೇಳಿದ ದಿನ
ಸಹಪಾಠಿಯೊಬ್ಬಳ ಕದ್ದು ಮುಟ್ಟಿದ ದಿನ
ನನ್ನ ಮದುವೆಯಂದು ಪ್ರಸ್ತದ ರಾತ್ರಿ
ಹುಟ್ಟಿದೆನೆ ನಾನು?

ನಡುಗುತ್ತಾ ದಾಖಲಿಸುತ್ತೇನೆ
ಜನ್ಮದಿನಾಂಕ : xx - yy - xy

Saturday, 15 November 2014

ಭೂಮಿಗೀತ

 ಭೂಮಿಗೀತ

ನನ್ನ ನಾನೇ ತಬ್ಬಿ
ನೆನಪ ಹಾಸಿ ಹೊದ್ದು
ಇರುಳ ಕುರುಳ ಸರಿಸಿ
ಕನಸ ಕಣ್ಣ ತೆರೆದೆ

ನಿಶೆಯ ಕರಿಯ ನಶೆ
ಜಗವ ಜಡವ ಆಗಿಸಿದೆ
ಜೀವರಾಶಿ ನಿದ್ರೆ ನಿಚ್ಚಳ
ತಿರೆಯ ಹರೆಯ ಎಚ್ಚರ

ಭುವಿಯ ವಿರಹ ಗಾನ
ಇರುಳಿನಲಿ ಇಮ್ಮಡಿ
ಹಗಲ ಚಂದ್ರ ಕಾಣನು
ಇರುಳ ಚಂದ್ರ ಇರಿವನು

ಹಗಲ ಮರೆಯ ಇನಿಯ
ಮುಸ್ಸಂಜೆಯಲಿ ಇಣುಕುವ
ಮರೆಯದಂತೆ ವಿರಹ ಗಾನ
ಇರುಳ ತುಂಬ ಹಾಡುವ

ಹಗಲ ಬೆಳಕು  ಹರಿವ ಮುನ್ನ
ಇನಿಯ ದೂರಸರಿವ ಮುನ್ನ
ನೋಟದಂಚಿನ ನೋವ
ಮುತ್ತು ಚಿಮ್ಮಿ ಸಿಡಿದಿದೆ

ಹೂವು ಬಳ್ಳಿ ಎಲೆ
ಹಸಿರ ಮೇಲೆ ಸುರಿದಿದೆ
ತುಳಿಯದಿರಿ ಇಬ್ಬನಿ
ಅದುವೆ ವಿರಹ ಕಂಬನಿ.

Thursday, 13 November 2014

ನೀನು-ನಾನು

ನೀನು-ನಾನು

ನೀನು
ಮುಂಗೈ ಮೇಲಣ ಹಚ್ಚೆಯಲ್ಲ
ಬೆನ್ನ ಮೇಲಣ ಮಚ್ಚೆ
ಮರೆಯಲ್ಲಿಯೂ
ಸದಾ ಜಾಗೃತ
ಕೈಕೇಯಿ ವರದಂತೆ
ಸುಯೋಧನನ ತೊಡೆಯಂತೆ.

ನಾನು
ಮುಂಗಾಲ ಗೆಜ್ಜೆಯಲ್ಲ
ಮನದ ತೋರಣದ ಲಜ್ಜೆ
ವ್ಯಕ್ತದಲ್ಲಿಯೂ
ಸದಾ ಅವ್ಯಕ್ತ
ರಾಮನ ವನವಾಸದಂತೆ
ದ್ರೌಪದಿಯ ಶ್ರೀಮುಡಿಯಂತೆ.



ನೀನು-ನಾನು ಬದುಕಿನ, ಅಸ್ತಿತ್ವದ ಎರಡು ತುದಿಯ ಪ್ರಜ್ಞಾಬಿಂದುಗಳು. ಅವೆರಡು ಸಾಪೇಕ್ಷವೂ(ರೆಲೆಟಿವ್) ಹೌದು.

ನೀನು ಎಂಬ ಭಾವ ನನ್ನೊಳಗೆ ಮರೆಯಾಗಿದ್ದರೂ ಸದಾ ಜಾಗೃತವಾಗಿರುತ್ತದೆ. ಹಚ್ಚೆ ಮುಂಗೈ ಅಥವಾ ದೇಹದ ಮೇಲಿನ ಭಾಗಗಳಲ್ಲಿದ್ದು ಅದನ್ನು ಹಾಕಿಸಿಕೊಳ್ಳುವ ಉದ್ದೇಶವೇ ಅದನ್ನು ಪರರು ನೋಡಲಿ ಎಂದು. ಆದರೆ ಮಚ್ಚೆ ಚಿಕ್ಕದು, ಅದು ಎಲ್ಲಿದೆ ಎಂದು ಆ ವ್ಯಕ್ತಿಗೆ ಮಾತ್ರ ಗೊತ್ತಿರುವಂತಹದ್ದು. ನೀನೆಂಬ ಭಾವ- ಅದು ಪ್ರೇಮಿಯ ವಿರಹವೂ ಆಗಬಹುದು ಅಥವಾ ಭಕ್ತನ ಆರಾಧನಾಭಾವವೂ ಆಗಬಹುದು, ಈ ಬಗೆಯ ಸುಪ್ತವಾದ ಆದರೆ ಸದಾ ಜಾಗೃತ ಪ್ರಜ್ಞೆ.

ನಾನು ಎಂಬುದು ತನ್ನಿರವನ್ನು ಇದ್ದೂ ತೋರದಂತಿರುವ ಕೇಂದ್ರ. ಗೆಜ್ಜೆ ಹೇಗೆ ತನ್ನ ನಾದದಿಂದ ವ್ಯಕ್ತಿಯ ರೂಪವನ್ನು ಕಣ್ಮುಂದೆ ತರುತ್ತದೋ ಹಾಗೆ ಮನದ ಬಾಗಿಲಿನ ತೋರಣದಂತಿರುವ ನಾನೆಂಬ ಭಾವ ಗುಪ್ತವಾದರೂ ಇಡೀ ಬದುಕಿನ ಅಸ್ತಿಭಾರವೇ ಆಗಿರುತ್ತದೆ. ನಾನೆಂಬ ಭಾವ - ಅದು ಮಿತದ ಅಹಂ(ಪ್ರೇಮಿಯ ನಾನು) ಆದರೂ ಆಗಬಹುದು ಅಥವಾ ಅಹಂ ಬ್ರಹ್ಮಾಸ್ಮಿ ಎಂಬ ಆತ್ಮಜ್ಞಾನವೂ ಆಗಬಹುದು, ಏನೇ ಆದರೂ ಅದು ವ್ಯಕ್ತದಲ್ಲಿ ಅವ್ಯಕ್ತವೇ ಆಗಿರುವ ಅನುಭವ!

ನೀನೆಂಬ ಭಾವಕ್ಕೆ ಕೈಕೇಯಿಯ ವರ ಮತ್ತು ಸುಯೋಧನನ ತೊಡೆಯನ್ನು ಉಪಮೆಯಾಗಿ ಬಳಸಲಾಗಿದೆ. ಇಲ್ಲಿ ಮತ್ತೊಂದು ಜಾಣ್ಮೆಯಿದೆ. ‘ಕೈಕೇಯಿ ವರ’ ಎನ್ನುವಾಗ ಅದು ಕೈಕೇಯಿಗೆ ದಶರಥನಿತ್ತ ವರವೂ ಆಗಬಹುದು ಅಥವಾ ಕೈಕೇಯಿ ಬೇಡಿದ ವರವೂ ಆಗಬಹುದು. ‘ಸುಯೋಧನನ ತೊಡೆಯೂ’ ಅಷ್ಟೆ. ಅದು ತುಂಬಿದ ಸಭೆಯಲ್ಲಿ ವಸ್ತ್ರ ಸರಿಸಿ ಪ್ರದರ್ಶಿಸಿ ತಟ್ಟಿ ಕುಳ್ಳಿರೆಂದು ದ್ರೌಪದಿಯನ್ನು ಆಹ್ವಾನಿಸಿದ ತೊಡೆಯೂ ಆಗಬಹುದು ಹಾಗೆಯೇ ಭೀಮನ ಗದಾಪ್ರಹಾರದಿಂದ ಜರ್ಝರಿತವಾದ  ತೊಡೆಯೂ ಆಗಬಹುದು.

ನಾನು ಎಂಬುದಕ್ಕೂ ಮತ್ತೆ ಸಂವಾದಿಯಾದ ಉಪಮೆಗಳನ್ನು ಬಳಸಲಾಗಿದೆ. ರಾಮನ ವನವಾಸ ಅಂದರೆ ರಾಮನು ಪಟ್ಟ ಕಷ್ಟಗಳು ಎಂದು ಒಂದರ್ಥ, ಅವನು ನಡೆಸಿದ ವನವಾಸ ಎಂದು ಇನ್ನೊಂದರ್ಥ. ದ್ರೌಪದಿಯ ಶ್ರೀಮುಡಿಯೂ ಅಷ್ಟೆ. ಅದು ಅವಳ ಮುಡಿ ಎಂದು ಹಾಗೆಯೇ ಅದು ಸದಾ ಪಾಂಡವರ ಜವಾಬ್ದಾರಿಯನ್ನು ನೆನಪಿಸುವ ಸಂಕೇತವೆಂದೂ ಅರ್ಥ.
ನಾನು- ನೀನುಗಳ ಸಂಬಂಧವನ್ನೂ ಈ ಉಪಮೆಗಳು ಚಿತ್ರಿಸುತ್ತವೆ. ರಾಮಾಯಣ-ಮಹಾಭಾರತದ ಈ ಉಪಮೆಗಳೇ ಪದ್ಯದ ಜೀವಾಳ. ಕೈಕೇಯಿಯ ವರ ರಾಮನ ವನವಾಸಕ್ಕೆ ನಾಂದಿ, ರಾಕ್ಷಸರ ನಾಶಕ್ಕೆ ಬುನಾದಿ. ಸುಯೋಧನನ ತೊಡೆಯು ದ್ರೌಪದಿಯ ರೋಷಕ್ಕೆ ಮಹಾಭಾರತ ಯುದ್ಧಕ್ಕೆ ಕಾರಣ. ಲಜ್ಜಾವತಿಯಾದ ದ್ರೌಪದಿಯ ಶಾಪ ವ್ಯಕ್ತ, ಅದರ ಪರಿಣಾಮ ಘನಗುಪ್ತ. ಕೈಕೇಯಿ ವರ ಗುಪ್ತ ಆದರೆ ಪರಿಣಾಮ ಸುವ್ಯಕ್ತ! ಹೀಗೆ ನೀನು-ನಾನುಗಳ ಏರಿಳಿತಗಳ ಸಾಲು ಬದುಕು.

Thursday, 6 November 2014

ಆಧುನೀಕರಣದ ಪಾಠ ಕೇಳ್ತಾವ ಪಾರಿವಾಳದ ಕೈಲಿ ಪ್ರೇಮಪತ್ರ ಕಳ್ಸಿ ಅಂತ ಹೇಳಾಕಾಯ್ತದಾ?

ಆಧುನೀಕರಣದ ಪಾಠ ಕೇಳ್ತಾವ ಪಾರಿವಾಳದ ಕೈಲಿ ಪ್ರೇಮಪತ್ರ ಕಳ್ಸಿ ಅಂತ ಹೇಳಾಕಾಯ್ತದಾ?


“ಯಾಕ್ಲಾ ಸಿಂಗ್ರಿ ಮಂಕಾಗಿದೀಯಾ?”
“ ಥೂ ಇವನೌನ....ಗ್ರಾಚಾರ ಸರಿ ಇಲ್ಲ ಬುಡು ರಾಘಣ್ಣ”
“ಯಾಕ್ಲಾ ಏನಾತು? ಅಚ್ಚೇ ದಿನ್ ಬಂದಿರೋದು ಕಾಣಾಕಿಲ್ವೇನ್ಲಾ?”
“ ಅದೇನ್ಬಂತೋ ಕಾಣೆ ಕಣಪ್ಪಾ...ಬೀಡಿ ಸುಡ್ತೈತೆ...ನನ್ಹೆಂಡ್ರು ಮೂವತ್ವರ್ಷದಿಂದ ಬುಡ್ಸಕಾಗ್ದೇರೋ ಬೀಡೀನಾ ಜೇಟ್ಲಿ ಜಟ್ ಅಂತ ಬುಡುಸ್ಬುಟ್ಟ”
“ ಒಳ್ಳೇದಾತು ಬುಡ್ಲಾ....ನಿನ್ ಎದೆಗೂಡು ಹೊಗೆಗೂಡಾಗೋಗಿತ್ತು....”
“ ಅದ್ಕಲ್ಲ ಕಣಣ್ಣ ಬೇಜಾರು......ಮಗ ಈ ವರ್ಸ ಕಾಲೇಜ್ ಸೇರದೆ....”
“ ಇದೂ ಒಳ್ಳೆ ಸುದ್ದಿ ಅಲ್ವೇನ್ಲಾ? ಫೇಲಾಗೋಯ್ತು ಅಂತ ಗೋಳಾಡೋ ಕಾಲ್ದಲ್ಲಿ ಪಾಸ್ ಆಗಿ ಕಾಲೇಜ್ ಸೇರದೆ ಅಂದ್ರೆ ಸಂತೋಸ ಕಣ್ಲಾ”
“ ಪೂರಾ ಯೋಳೋದ್ ಕೇಳಪ್ಪಾ.....ಒಸಾ ಮೊಬೈಲ್ ಕೊಡ್ಸು ಅಂತು, ಕೊಡ್ಸ್ದೆ. ಈಗ ನೋಡ್ದ್ರೆ.....ಮೊಬೈಲ್ ಮಡಿಕಂಡ್ರೆ ರೇಪಾಗೋಯ್ತದೆ ಅಂತಾವ್ರೆ...”
“ ಯಾವ್ ಬೇಕೂಪ್ ನನ್ಮಗನ್ಲಾ ಅಂಗಂದೋನು?”
“ ಮೆಲ್ಲಗ್ ಮಾತಾಡು ರಾಘಣ್ಣ, ಒಳಿಕಾಕಿ ಏರೋಪ್ಲೇನ್ ಎತ್ತಿಸ್ಬುಡ್ತಾರೆ...ಅಕ್ಕುಚುತಿಯಾಯ್ತು ಅಂತ...”
“ಮೆಲ್ಗೆ ಕೇಳ್ತೀನಿ, ಯಾರು ಅಂಗಂದೋರು? ಅವ್ರ್ದೇನು ಚುತಿಯಾಯ್ತದಂತೆ..ತಿಥಿ ಮಾಡ್ಬೇಕು ಇಂತ ನನ್ಮಕ್ಳಿಗೆ...”
“ ರಾಘಣ್ಣ... ಸಾಸಕ್ರು ಕಣಪ್ಪ ಅಂಗಂದೋರು...ಸಾಸಕ್ರು.....”
“.........”
“ ಮಕ್ಕಳ ತಾವ ಮೊಬೈಲ್ ಇದ್ರೆ ಮನ್ಸು ಕೆಟ್ಟೋಯ್ತದಂತೆ, ಕೆಟ್ಟದಾರಿ ಇಡೀತಾರಂತೆ....ಅಂಗೆ ರೇಪೂ ಆಗೋಯ್ತದಂತೆ....ನನ್ಹೆಂಡ್ರು ಮಗಿನ್ ಮೊಬೈಲ್ ಕಿತ್ತು ಮಡಿಕ್ಕಂಡವ್ಳೆ, ಮಗ ಮಧ್ಯಾನ್ದಿಂದ ಊಟ ಬುಟ್ಟು ಮನಗ್ಬುಟ್ಟದೆ”
“ ಯಾರ್ಲಾ ಅಂಗಂದೋನು...ಕಾಶಪ್ಪನೋ, ಕ್ಯಾಶಪ್ಪನೋ? ಅಥವಾ......”
“ಯಾರು ರಾಘಣ್ಣ ಕಾಶಪ್ಪ?”
“ಅದ್ಕೆ ನೋಡೂ ...ನೀನು ಬುದ್ವಂತ ಆದ್ರೂ ಐಎಎಸ್ ಪಾಸಾಗ್ಲಿಲ್ಲ....ಜಿ.ಕೆ. ನೇ ಇಲ್ವಲ್ಲೋ ಸಿಂಗ್ರಿ ನಿಂಗೆ....ಲೇ ಕಾಶಪ್ಪ ಅಂದ್ರೆ ಮೊನ್ನೆ ಮಲ್ಲಯ್ಯನ್ ಬಾರಲ್ಲಿ ಜೀನ್ಸ್ ಇಕ್ಕೊಂಡು ಕೈಯಲ್ಲಿ ಸಿಗರೇಟು ಸುಡ್ತಾವ ಗ್ಲಾಸ್ ಅಲ್ಲಿ ಬಣ್ಣದ್ ನೀರು ಬುಟ್ಕೊಂಡು ಕಣ್ಣು ಕೆಂಪೇರಿಸ್ತಾ ಕುಂತಿದ್ದ ಅಂತ ಪೇಪರ್ನಾಗೆ ಬರ್ಲಿಲ್ವೇನ್ಲಾ? ಅದೇ ಉನ್ಗುಂದ ಸಾಸ್ಕ ಇಜ್ಯಾನಂದ ಕಾಶಪ್ಪ...”
“ ಓ...ಈಗ್ಗೊತ್ತಾಯ್ತು..ಬುಡಣ್ಣ ಇನ್ಮ್ಯಾಲೆ ಗುಂಡು ಸಿಗರೇಟು ಎಲ್ಲ ಅಂತೋರ್ಗೆಯಾ....ಮತ್ತೆ ಈ ಕ್ಯಾಶಪ್ಪ ಯಾರಣ್ಣ?”
“ ಹಲ್ಕಾ ನನ್ಮಗ್ನೆ.....ಅದ್ಯಾರೂಂತ ಗೊತ್ತಿಲ್ದೆ ಕರ್ನಾಟ್ಕದಲ್ಲಿದ್ದೀಯ...ಮುಂದ್ಲ ಕಾವೇರಿ ಗಲಾಟೇನಾಗೆ ನಿನ್ನ ಕಾವೇರಿ ಜೊತೆ ತಮಿಳ್ನಾಡಿಗೆ ಹರಿಸ್ಬುಡ್ಬೇಕು....ಲೇ ಅವ್ರೇ ಕಣೋ ನಮ್ ಮಣ್ಣಿನ ಮೊಮ್ಮಗ!”
“ ಅಣ್ಣಾ.....”
“ಲೇ ಎದೆಗೊದಿತೀನಿ...ಕಣ್ ಕಣ್ ಬುಡ್ಬೇಡಾ...ದೇವೇಗೌಡ್ರು ಮಣ್ಣಿನ ಮಗ ಆದ್ಮೇಲೆ ಅವರ ಮಗ ಮಣ್ಣಿನ ಮೊಮ್ಮಗ ಅಲ್ವೇನ್ಲಾ?”
“ ಓ ಇಂಗೆ ಸಮಾಸಾರ...”
“ ಊಂ ಮತ್ತೆ ಈಗ ಅವ್ರೆ ಕಣ್ಲಾ ಕ್ಯಾಶಪ್ಪ.....ಒಪ್ಕಂಬುಟ್ರು ಕಾಸಿಲ್ದೆ ರಾಜಕೀಯ ಇಲ್ಲ ಅಂತ. ‘ನಲವತ್ತು ಕೋಟಿ ಮಡಗು ಎಂಎಲ್ಸಿ ಆಗು’ ಅಂದ್ರು ಅಂತ ಸುದ್ದಿ ಬರ್ಲಿಲ್ವೇನ್ಲಾ?”
“ನಲವತ್ತು ಕೋಟಿ ಅಂದ್ರೆ ನಾಕರ ಪಕ್ಕ ಎಸ್ಟು ಸೊನ್ನೆಯಣ್ಣಾ?”
“ಬೇವಾರಿಸ್ ನನ್ಮಗ್ನೆ.....ಅದು ಗೊತ್ತಿದ್ರೆ ನಾನು ನೀನು ಯಾಕ್ಲಾ ಇಂಗೆ ಫುಟ್ಪಾತಲ್ಲಿ ಹಲ್ಟೆ ಒಡಿತಿದ್ವಿ....ಈ ಸೊನ್ನೆಗಳೇ ನಮ್ಮ ಸ್ವಸಂತ್ರ ಭಾರತದ ಸಾಧನೆ ಕಣೋ.”
“ ಅಲ್ಲಣ್ಣ ಕನ್ನಡದಲ್ಲಿ ಬೇವಾರ್ಸಿ ಅಂತ ಬೈದೆನೆಯಾ...ಇದೇನಣ್ಣ ಇಂಗೆ ಬಿಡ್ಸಿ ಬಿಡ್ಸಿ ಬೇವಾರಿಸ್ ಅಂತ ಬೈತೀಯಾ?”
“ ಲೇ ಮೋದಿ ಗೊತ್ತೇನ್ಲಾ?”
“ ಅದೇ ಗಡ್ಡ ಬುಟ್ಕೊಂಡು, ಹೆಂಡ್ರ ಬುಟ್ಬುಟ್ಟಿ...೫೬ ಇಂಚೆ ಎದೆಯ ಉಬ್ಬಿಸ್ಕೊಂಡು..ಪ್ರಧಾನಿ ಆಗವ್ರಲ್ಲ....’
“ಥೂ...ಅಂಗೇನ್ಲಾ ದೊಡ್ಡೋರ್ನ ಗುರ್ತ್ಸೋದು?...ಓಗ್ಲಿ...ಈಗ ಇಂದೀನ ಜಾಸ್ತಿ ಬಳಸ್ಬೇಕೂಂತ ಒಂತರಾ ಒತ್ತಡ ಐತೆ ಗೊತ್ತೇನ್ಲಾ? ಅದ್ಕೆ...ಹಿಂದಿ ಪದ ಲಾವಾರಿಸ್ ಮತ್ತೆ ಕನ್ನಡ ಪದ ಬೇವಾರ್ಸಿ ಸೇರ್ಸಿ ಬೇವಾರಿಸ್ ಅಂತ ಬೈದೆ....”
“ ಏ ನಿಂದೊಳ್ಳೆ ತಮಾಸೆ, ಅಥ್ವಾ ಮೋದಿ ಮೆಚ್ಸಿ ಏನಾರ ಸೀಟು..ಪಾಟು....ಅದಿರ್ಲಿ ಕಾಸಪ್ಪ, ಕ್ಯಾಸಪ್ಪ ಇಬ್ರೂ ಅವ್ರವ್ರ್ ಲೋಕ್ದಾಗವ್ರೆ.....ಅವ್ರಲ್ಲ ಬುಡಣ್ಣ...ಅದೇನೋ ಸಾಸಕರ ಸಮಿತಿ ಅಂತೆ ..ಕಣಣ್ಣ....ಮೊಬೈಲ್ ಕೊಡ್ಬೇಡಿ ಮಕ್ಕಳ ಕೈಗೆ, ಸ್ಕೂಲು, ಕಾಲೇಜ್ನಾಗೆ ಬಳಸಂಗಿಲ್ಲ ಅನ್ಬುಟ್ಟವ್ರೆ.”
“ ಸರ್ಯಾಗ್ ಹೇಳವ್ರೆ ಬುಡು ಕ್ಲಾಸಲ್ಲಿ ಕುಂತು ಮಸೇಜು, ಪಿಸೇಜು, ಪೇಸ್ಬುಕ್ಕು ಅಂತ ನೋಡ್ದ್ರೆ ಪಾಠ ಎಂಗ್ಲಾ ತಲೆಗೋಗ್ಬೇಕು?..ಮೊಬೈಲಿರೋದು ಸಾಸಕರಿಗೆ ಮಾತ್ರ...ಸದನದಲ್ಲಿ ಬಿಸಿಬಿಸಿ ಚರ್ಚೆ ನಡೀತಿರ್ಬೇಕಾದ್ರೆ ಇವ್ರು ಹಸಿಹಸಿ ದೃಸ್ಯಾನ  ಅಂಗೆ ನೋಡ್ತಾವ ಪುಲಕಿತರಾಗ್ಬೇಕು ಕಣ್ಲಾ... ....”
“ ಬುಡು ಬುಡು ರಾಘಣ್ಣ ನೀನು ಇಸ್ಯಾನ ಎಲ್ಲಿಂದೆಲ್ಲಿಗೋ ಎಳ್ಕತೀಯಾ.....ಈಗ ಏನಪಾ ಮಾಡೋದು...?”
“ ಲೇ, ದೇಸ ಮುಂದೆ ಓಡ್ಬೇಕೂ ಅಂತಾ ಕೇಂದ್ರದಲ್ಲಿ ಆನಂದ ಗೌಡ್ರು ಬುಲೆಟ್ ಟ್ರೇನು ಬುಡ್ತಾವ್ರೆ..ಇಲ್ಲಿ ನೀವು ಆಧುನೀಕರಣದ ಪಾಠ ಕೇಳ್ತಾವ ಪಾರಿವಾಳದ ಕೈಲಿ ಪ್ರೇಮಪತ್ರ ಕಳ್ಸಿ ಅಂತ ಹೇಳಾಕಾಯ್ತದೇನ್ಲಾ? ನೀನು ಆ ಮೂಲೆ ಮನೆ ನಿಂಗಿಗೆ ನನ್ ತಾವಾನೇ ಕಾಗ್ದ ಬರ್ಸಿ ಬರ್ಸಿ ನನ್ಕೈಯಾಗೆ ಕಳ್ಸಿ ಕಳ್ಸಿ ಆಮೇಲೆ ಲಗ್ನಪತ್ರಿಕೆ ದಿನ ಅವಳ್ಗೆ ನಿನ್ ಬಂಡ್ವಾಳ ಗೊತ್ತಾಗಿ ರಂಪಾಟ ಆಗ್ಲಿಲ್ವೇನ್ಲಾ?”
“ ಬುಡ್ತು ಅನ್ನು ರಾಘಣ್ಣ, ಈಗ ದಿವ್ನಾಗ್ ಸಂಸಾರ ನಡ್ಸಿಲ್ವಾ? ಮಗಿನ್ ಪೋನ್ ಕಿತ್ ಮಡಿಕ್ಕಂಡವ್ಳೆ. ಕೊಡಾಕಿಲ್ಲ, ಮಗ ಹಾಳಾಗ್ ಹೋಯ್ತದೆ ಅಂತಾವ್ಳೆ. ಹೆಂಡ್ರು ಅಂತ ಸುಮ್ಗೆ ಬಿಟ್ಟ್ಟೀವ್ನಿ...”
“ ನೀನ್ ಬಲ್ ಸೂರ ಬುಡು. ಅಲ್ಲಾ ಈ ಫೋನ್ ಇಂದ ಎಂತಂತ ಘನಂದಾರಿ ಕೆಲ್ಸ ಆಯ್ತದೆ ಓಯ್ತದೆ..ವಸಿನಾರ ಬುದ್ಧಿ ಬ್ಯಾಡ್ವೇನ್ಲಾ ಇವ್ರಿಗೆ? ಕದ್ದಾಲಿಕೆ ಮಾಡಿ ಸಿಗಬಿದ್ದು ಮಸಿ ಬಳ್ಕಂಡವರವ್ರೆ, ಫೋನ್ ಅಲ್ಲಿ ಮಾತಾಡಿ ಮಾತಾಡಿ ಬರಡು ಹೃದಯವ ಹಸಿಯಾಗಿಸ್ಕೊಂಡೂ ಗದ್ದುಗೆ ಬುಟ್ಟು ಸಂಸಾರದ್ ಸೆರಗಿಡಿದವರವ್ರೆ. ಮೊದ್ಲಿನಂಗೆ ಫೋನ್ ಬೂತ್ಗಳೆಲ್ಲೈತಪ್ಪಾ ಈಗ? ದೂರ ಪಾರ ಓಗೋ ಮಕ್ಳು ಮನೆಗೆ ಇಸ್ಯ ತಿಳಿಸ್ಬೇಕು ಅಂದ್ರೆ ಏನಪ್ಪಾ ಮಾಡೋದು?”
“ ಪರಿಹಾರ ಏಳಪ್ಪಾ ಅಂದ್ರೆ ಬುಲ್ಡೆ ಬುಡ್ತಿಯಲ್ಲ ರಾಘಣ್ಣ.....”
“ ಏನು ನನ್ಮಗ ಇವ್ನು, ಕಾಸ್ ಕೊಟ್ ಮಡಿಕಂಡವ್ನೆ, ಪರಿಹಾರ ಏಳ್ಬುಡ್ಬೇಕು. ಬುದ್ಧಿ ಇದ್ರೆ ಪರಿಯಾರನೂ ಇರ್ತದೆ ಕಣ್ಲಾ...ಅಣೇಲಿ ನೀರಿದ್ರೂ ತೂಬುನ್ ಬಾಯ್ ತೆಗೆದ್ರೆ ಅಲ್ವೇನ್ಲಾ ನೀರು ಅರಿಯೋದು?”
“ ಅಂದ್ರೆ?”
“ ಲೇ, ಅದೆಂತದೊ ಜಾಮರ್ ಅಂತೆ ಕಣ್ಲಾ. ಸಾವ್ರಾರು ಹುಡ್ರುಗೆ ಮೊಬೈಲ್ ತರ್ಬೇಡಿ ಅನ್ನೋ ಬದ್ಲು ಅದ್ನ ಬಿಲ್ಡಿಂಗ್ ಗೆ ಸಿಗಿಸ್ಬುಟ್ರೆ ಅಲ್ಲಿ ಮೊಬೈಲ್ ಸಿಗ್ನಲ್ ಬರಾಕಿಲ್ಲ ಕಣ್ಲಾ. ಊರ್ಗೆಲ್ಲ ಚಪ್ರ ಆಕ್ಸೋ ಬದ್ಲು ತಲೆಗೆ ವಲ್ಲಿ ಸುತ್ಕೊಂಡು ನೆಳ್ಳು ಕಂಡಂಡ್ಕಂಗೆ ಕಣ್ಲಾ ಇದು. ಬಿಲ್ಡಿಂಗ್ ಒಳ್ಗೆ ಸಿಗ್ನಲ್ ಸಿಗಾಕಿಲ್ಲ. ಸ್ಕೂಲು ಕಾಲೇಜು ಇಂದ ಆಚೆ ಬಂದ್ಮೇಲೆ ಎಷ್ಟಾರ ಮಾತಾಡ್ಲಿ ಬುಡ್ಲಾ.....”
“ ಮತ್ತ ಅದ ಯಾಕೆ ಮಾಡಾ ಒಲ್ರು?”
“ಅಂಗೆ ಮಾಡ್ಬುಟ್ರೆ ಮೇಸ್ಟ್ರುಗಳ ಮೊಬೈಲೂ ಸತ್ತೋಯ್ತದೆ! ಅವ್ರ್ ಎಂಡ್ರು ಮಕ್ಳು ಕುಟ್ಟೆ ಮಾತಾಡ್ಬೇಕಲ್ಲಾ.....ಅದ್ಕೆ ಬಿಲ್ಡಿಂಗೆ ಜಾಮರ ಹಾಕೋ ಬದಲು ಸಾವ್ರಾರು ವಿದ್ಯಾರ್ಥಿಗಳು ಮೊಬೈಲ್ ತರಂಗಿಲ್ಲ ಅಂತ ಕಾನೂನು ಮಾಡ್ತಾವ್ರೆ.”
“ ಸರಿಯಿಲ್ಲ ಬುಡಣ್ಣ ಇದು. ಈಗ ಮಗೀಗ್ ಎಂಗಪ್ಪಾ ಸಮಾಧಾನ ಮಾಡೋದು?”
“ ಏ, ಇದೇನು ಆಗಲ್ಲ, ಓಗಲ್ಲ ನಡಿಲಾ ಸಿಂಗ್ರಿ”
“ ಇದೇನಣ್ಣ ಇಂಗಂದ್ಬುಟ್ಟೆ!”
“ ಮತ್ತೆ ಈ ಪಾಟಿ ಮೊಬೈಲು ಕಂಪೆನಿಗಳು ಐಲು ಜನನಾಯಕ್ರು ಇರೋವಾಗ ಆಯ್ತದೇನ್ಲಾ ಇದು?...ಸುಮ್ನೆ ಹೊಟ್ಟೆ ಕೆಟ್ಟಾಗ ಒಂದು ಹೂಸು ಬಿಟ್ಟಂಗೆ ಇಂಗೆ ಒಂದು ಮಾತು ಎಸೀತಾರೆ. ಮೂರು ನಿಮ್ಸ ಮೂಗು ಮುಚ್ಕೊ....ಮೂರ್ ದಿನ ಆದ್ಮೇಲೆ ಕಾನೂನ ಕಿತ್ತಾಕ್ತಾರೆ....ನಡಿ ಮಗೀಗೂ ಆ ನಿಂಗವ್ವಗೂ ಸಮಾಧಾನಾ ಏಳ್ತೀನಿ.”
“ ಬಾರಣ್ಣೋ ಪುಣ್ಯ ಬತ್ತದೆ. ಇವತ್ತು ಸನಿವಾರ ಅಲ್ಲ್ವಾ ಕಾಳುಪ್ಪಿಟ್ ಮಾಡವ್ಳೆ, ಜೊತೆಗೆ ಬಿಸಿ ಕಾಫೀನೂ ಉಯ್ಕಳಾವ..ಬಾ...”

Sunday, 2 November 2014

ಶ್ರೀರಘುವೀರೇಶ್ವರ ವಚನಗಳು


ಶ್ರೀರಘುವೀರೇಶ್ವರ ವಚನಗಳು

ಕೊಳಲನಾದ ಬೇಕೆಂಬವರು ತುಟಿಯೆಂಜಲಿಗಂಜಿದೊಡೆಂತಯ್ಯಾ?
ಹರಳಹಾರ ಬೇಕೆಂಬವರು ಕೊರಳೊಡ್ಡದಿರೆಂತಯ್ಯಾ?
ಬೆಳಕು ಬೇಕೆಂಬವರು ಕಿಡಿಗೆ ನಡುಗಿದೊಡೆಂತಯ್ಯಾ?
ಕೆಳೆತನ ಬಯಸಿದವರು ವಿರಹಕ್ಕಂಜಿದೊಡೆಂತಯ್ಯಾ?
ದ್ವಂದ್ವವಿಲ್ಲದೊಡೆ ಶಿವ-ಶಿವಭಕ್ತನೆಂತಯ್ಯಾ?
ಅಯ್ಯಾ ಕೇಳಯ್ಯಾ, ಎನ್ನ ಮನದ ದ್ವಂದ್ವಕೆ
ನೀನೇ ಸಾಕ್ಷಿ ಶ್ರೀರಘುವೀರೇಶ್ವರ. ()

ಸೂರ್ಯನುದಯ ಪೂರ್ವದಲೆಂಬರು
ಅಸ್ತಮವು ಪಶ್ಚಿಮದಲೆಂಬರು
ದಿರಸುಗಳೆಮಗುಂಟು ದಿಗಂಬರನಿಗುಂಟೆ?
ದಿಕ್ಕುಗಳೆಮಗುಂಟು ದಿನಕರನಿಗುಂಟೆ ಅಯ್ಯಾ?
ನಿನ್ನ ನೆನಹೇ ಉದಯ ಮರೆವೇ ಅಸ್ತಮವು
ನೀನೇ ಎನ್ನ ದಿನಕರ ಶ್ರೀರಘುವೀರೇಶ್ವರ. ()

ಉದಯಾಸ್ತಗಳು ತಿರೆಮುಗಿಲುಗಳಾಟ
ನಕ್ಷತ್ರಗ್ರಹಗಳ ಬೆಳಕು-ಕತ್ತಲಿನಾಟ
ಎನ್ನೆದೆಯ ಕತ್ತಲಿಗೆ ಕಾರಣವುಂಟೆ ಅಯ್ಯಾ?
ಭಾವಾಗ್ರಹಗಳ ಬೇಗುದಿಯ ಗ್ರಹಣ
ಗುಣಗ್ರಾಹಿ ಮುಕ್ಕಣ್ಣ ತೆರೆಸೆನ್ನ ಒಳಗಣ್ಣ
ಬೆಳಗು ಬೆರಗಿನ ಒಳಹೊರಗ ಶ್ರೀರಘುವೀರೇಶ್ವರ. ()

ನೆನಪು ವರವೆಂಬರು ಮರೆವೆ ಶಾಪವು
ವರ-ಶಾಪ ಸಂದರ್ಭಾನುಸಾರ ಅಯ್ಯಾ
ದುಷ್ಯಂತನ ನೆನಪು ಶಾಪ ಶಕುಂತಲೆಗೆ
ಪಿತನಮರೆಶಾಪ ವರ ನಚಿಕೇತಗೆ
ಮನದ ಹರಿಗೋಲು ಚಿತ್ತನದಿಯಲಿ
ಹರಿವಾಗ ನೆನಪು ನಿಂತಾಗ ಮರೆವು
ನಿನ್ನ ಧ್ಯಾನವೇ ವರ ಎಚ್ಚರ ಶಾಪ ಶ್ರೀರಘುವೀರೇಶ್ವರ. ()

ರತಿಸುಖವೆ ಪರಮಸುಖವೆಂಬರು
ಸತಿಯೊಡನೊಂದಾದ ಶಿವನರಿಯದ ಮೂಢರು
ನಾನು-ನೀನುಗಳಳಿದ ಸಮಾಗಮವೇ ಸುಖ
ನೀನೆನ್ನ ಪತಿ ನಾ ನಿನ್ನ ಸತಿ
ಬಾ ನಡೆಸೋಣ ನಿತ್ಯರತಿ,
ನಿನ್ನಕ್ಕರತೆಯು  ಮತಿಯರಿಯದ
ರತಿಗಿಂತ ಮಿಗಿಲಹುದು ಶ್ರೀರಘುವೀರೇಶ್ವರ. ()

ಚಂದಿರನ ಮುಡಿಗಿರಿಸಿ ಚಂದ್ರಶೇಖರನಾದೆ
ಗಂಗೆಯನು ಜಡೆಗಿರಿಸಿ ಗಂಗಾಧರನಾದೆ
ವಿಷವ ಕಂಠದಲಿರಿಸಿ ವಿಷಕಂಠನಾದೆ
ಎನ್ನನೇಕೆ ಧರಿಸಲೊಲ್ಲೆ ಅಯ್ಯಾ ನೀನು?!
ಎನ್ನ ಮನದ ವಿಷವು ಹಾಲಾಹಲಕಿಂತ ಮಿಗಿಲೆ?
ಎನ್ನ ಮನದೋಟ ಗಂಗೆಗಿಂತ ಬಿರುಸೆ?
ಧರಿಸದಿರ್ದೊಡೆ ಎನ್ನ ನಿನಗೆ ಶಿವಭಕ್ತರಾಣೆ ಶ್ರೀರಘುವೀರೇಶ್ವರ. ()

ಕಟುಕನಂಗಡಿಯ ಮುಂದೆ ಕುರಿಮಂದೆ
ತೃಣದ ಹಸಿರನು ತಣಿಯುವಾನಂದದಿ
ಅರಿಯದು ತೂಗು ಕೊಕ್ಕೆಯ ಹರಿತ ಕತ್ತಿಯ ಅಲುಗ
ಜಗದ ಆಮೋದದಲಿ ತೊಡಗಿಹವೆನ್ನ
ಕರಣೇಂದ್ರಿಯಗಳು ಅರಿಯವು ಜರೆಯ
ವ್ಯಾಧಿಯ ಕಾಲನ ಕಡೆಯ ಕರೆಯ
ಪಾರುಮಾಡೆನ್ನ ಕರಣಕಾಲಗಳಿಂದ ಶ್ರೀರಘುವೀರೇಶ್ವರ. ()

ಆವುಗೆಯ ಧರಿಸಿ ಪಾದವ ರಕ್ಷಿಸಬಹುದು
ಪೇಟವ ಧರಿಸಿ ಶಿರವ ಕಾಪಿಡಬಹುದು
ಅಂಗಿಯ ಧರಿಸಿ ಕಾಯವ ಕಾಯಬಹುದು
ನೋಟದಿಂ ಕಣ್ಣ ಕಾಪಿಡುವುದೆಂತಯ್ಯಾ?
ಆಲಾಪದಿಂ ಕಿವಿಯ ಕಾಪಿಡುವುದೆಂತಯ್ಯಾ?
ಅಂತರಂಗದಾವುಗೆಯ ಕಿಚ್ಚ ತಣಿಸುವ
ಪರಿ ತಿಳಿಸಯ್ಯಾ ಶ್ರೀರಘುವೀರೇಶ್ವರ. ()

ಚಕ್ಕಡಿಯ ಕೀಲೆಣ್ಣೆ ಸವೆಸದದು ಗುಂಬವನು
ಚಕ್ರವದು ಅಚ್ಚಿನಂಚದಾಟದೊಲು ಕಡಾಣಿ
ಅರೆಕಾಲು ಚಕ್ರವರ್ತುಲಕೆ ಸುತ್ತಿರುವ ಬಳೆ
ಕಾಯಚಕ್ಕಡಿಗೆ ಭಾವದಚ್ಚು ಮನದ ಗುಂಬ
ಹರಿಯುತಿವೆ ಉರುಳುತಿವೆ ಚಿತ್ತಚಿಂತನೆಯು
ನಿನ್ನ ನೆನಪೇ ಬಳೆ-ಕಡಾಣಿ, ಜಪವೇ ಕೀಲೆಣ್ಣೆ
ನಡೆಸೆನ್ನ ನಿನ್ನಡಿಯತ್ತ ಶ್ರೀರಘುವೀರೇಶ್ವರ. ()

ಜಲದ ಮಲಿನತೆಗೆ ನಿಂತನೆಲೆಯೇ ಕಾರಣ
ಮನದ ಮಲಿನತೆಗೆ ಕುಂತ ಚಿಂತನೆಯೇ ಕಾರಣ
ಜಲದ ಮೂಲವು ಎನ್ನ ಮನದ ಮೂಲವು
ಶುದ್ಧವೂ ಸ್ಫಟಿಕವೂ ಆದ ನೀನೇ ಅಯ್ಯಾ
ಎಮ್ಮಯ ಚಿಂತೆ ನೆಲೆಕಾಣದಿರಲಿ ಮನ
ಹರಿವ ನದಿಯಾಗಲಿ ಮಲಿನತೆಗೆ ನಿನ್ನ
ನಾಮಜಪವೇ ಸಾಬಾಣ ಶ್ರೀರಘುವೀರೇಶ್ವರ. (೧೦)

ಜಗದಗಲ ಕೊಡೆಪಿಡಿದು ಮೆರೆಮೆರೆವ
ಬಿರುದುಬಾವಲಿಗಳಿಗೆ ಪಲ್ಕಿರಿಯುವವ
ಘನದ್ರವ್ಯಜಲಖನಿಜಗಳ ಅಗೆದೆಗೆವವ
ಒಳಜಗದ ಬೆರಗನರಿವನೇನಯ್ಯಾ?
ಅಂತರಿಕ್ಷದ ತಿಂಗಳು ನಕ್ಷತ್ರಗಳ
ಚಿತ್ರವಿಚಿತ್ರಗಳ ಮನದ ತಿಳಿಗೊಳದಿ
ಬಚ್ಚಿಟ್ಟು ನಲಿವವನು ಶ್ರೀರಘುವೀರೇಶ್ವರ. (೧೧)

ಬೆರಳ ಕಳೆದೊಡೇನು ವಿದ್ಯೆಗೆರವಾಯ್ತೆ?
ಕಣ್ಣ ಕಳೆದೊಡೇನು ಭಕ್ತಿಗೆರವಾಯ್ತೆ?
ಸತಿಯ ಕಳೆದೊಡೇನು ಸತ್ಯಕೆರವಾಯ್ತೆ?
ನಿನ್ನರಿವ ಬೆರಗಿಗೆ ಏನಕಳೆದೊಡೇನು
ಕಳೆದೊಡೆವೆಯೆ ಜ್ಞಾನಬಾಸಿಂಗ
ನೀನೆನ್ನ ಮದುವಣಿಗ ತೆಗೆದುಕೊಳೊ
ಎಲ್ಲವನು ನೀಡೆನೆಗೆ ನಿನ್ನ ಶ್ರೀರಘುವೀರೇಶ್ವರ. (೧೨)

ಮೊಳಕೆಯೊಡೆಯಲು ನೆಲದ ಹದಬೇಕು
ಜಲ ಬೇಕು ಕೃಷಿಕನ ಬೆವರ ಹನಿ ಬೇಕು
ಸುಡದ ಬಿಸಿಲದು ಬೇಕು ಕೊಚ್ಚದ ಮಳೆ ಬೇಕು
ಅಂತಃಸತ್ವವಿರಬೇಕು ಬಿರಿಯುವೆದೆಗಾರಿಕೆ ಬೇಕು
ಅಯ್ಯಾ, ನನ್ನೊಡಲೊಳಗೆ ನೀ ನೆಟ್ಟ ಬಿತ್ತ
ಚಿಗುರುವುದೆಂದು? ಕೃಪೆದೋರಿ ಬೆಳೆಸೋ
ಸಹಸ್ರಾರ ಫಲವ ಕಾಣಿಸೊ ಶ್ರೀರಘುವೀರೇಶ್ವರ. (೧೩)

ತನಗೊಂದು ಜಗಕೊಂದು ಒಳ-ಹೊರಗು
ಮನಕೊಂದು ಮೈಗೊಂದು ನಾನು-ತಾನು
ಲಿಂಗಕೊಂದು ಜಂಗಮಕೊಂದು ಶಿವ-ಭಕ್ತ
ಇಂತಿರಲು ನಾನುನೀನೇನು ಅವುಇವುಗಳೇನು?
ಕನ್ನಡಿಯ ಬಿಂಬವನು ಚುಂಬಿಸುವುದುಂಟೆ
ಚಿತ್ತಾರದ ನವಿಲಿನದು ನರ್ತನವೆ ಅಯ್ಯಾ?
ಎರಡನೊಂದಾಗಿಸಿ ಹರಸೊ ಶ್ರೀರಘುವೀರೇಶ್ವರ. (೧೪)

ಮೀನು ಮೀಯದು ಮಂಗ ದಣಿಯದು
ಕಮಂಡಲವ ನುಂಗಿ ಭೂಮಂಡಲವನೆಳೆವುದು
ಸಮುದ್ರವನೇ ಲಂಘಿಸಿ ಲಂಕೆಯ ಸುಡುವುದು
ಗಂಧ ದೂಪ ದೀಪಾರ್ಚನೆ ಆಚಾರಗಳಾಚೆ
ಶ್ರದ್ಧೆ-ನಂಬಿಗೆಯ ಧೀಲಿಂಗ ನೀನು ಅಯ್ಯಾ
ಎನ್ನ ಕಾಯದ ಮೀನು ನೀನೆನ್ನ ಮನದ ಮಂಗವು
ಬದುಕಿನರ್ಚನೆಗೆ ನೀನೇ ದೀಪವು ಶ್ರೀರಘುವೀರೇಶ್ವರ. (೧೫)

ಉಂಡವರು ಬಿಟ್ಟೆದ್ದ ಎಲೆಗಳಿಗೆ
ಮುಗಿಬಿದ್ದು ಉಣುವರು ಹಸಿದವರು
ಹಸಿವಿಗಂತ್ಯವದಿಲ್ಲ ಶಿಶುರೋದನದಂತೆ
ಬದುಕಿನ ಚಪಲಗಳಿಗೆ ಕೊನೆಯೆಂದು, ಅಯ್ಯಾ?
ಹಸಿದು ಸತ್ತವರುಂಟು ಅಜೀರ್ಣ ಮರಣಗಳುಂಟು
ಹಸಿವೆ ಸಾಯಲಿಬೇಕು ಬದುಕು ಜೀರ್ಣವಾಗಲಿಬೇಕು
ನಾ ನಿನ್ನ ಹಸಿವು ನೀನೆನ್ನ ಬದುಕು ಶ್ರೀರಘುವೀರೇಶ್ವರ. (೧೬)

ಉಂಡವರು ಬಿಟ್ಟೆದ್ದ ಎಲೆಗಳಲಿ ಉರುಳಾಡಿ
ಒರಲುವರು ದೇವರಿಗೆ ಹರಕೆ ಸಲ್ಲಿಸಿಹೆವೆಂದು
ಅವನ ಒಲುಮೆಗೆ ಇವರ ಎಂಜಲು ಬೇಕೆ ಅಯ್ಯಾ?
ಧರುಮದ ವ್ಯಾಪಾರಿಗಳಿವರು ಕರುಮ ಚಕ್ರಕೆ
ಸಿಲುಕಿ ಒರಲುವಂದು ಉರುಳಾಡಿ ನಗುವ ವೀರೇಶ್ವರ
ಇಳೆಯ ಭೋಗದಲಿ ಮಡಿಯು ನನ್ನೊಡೆಯನೊಬ್ಬನೇ
ನಾನಿನ್ನೆಂಜಲು ನೀನೆನಗೆ ಮೀಸಲು ಶ್ರೀರಘುವೀರೇಶ್ವರ. (೧೭)

ಮರುಭೂಮಿಯಲಿ ಕಳವೆ ಬೆಳೆಯುವುದುಂಟೆ?
ಸಮುದ್ರದೊಳು ಅರಳಿ ಕೊನರುವುದುಂಟೆ?
ಬೇರಿಗೊಂದು ಭೂಮಿ ಎಲೆಗೊಂದು ಆಕಾಶ
ಆಳದ ಅರಿವಿನ ಹರಹು ವಿಸ್ತರದ ವಿವೇಕ
ಪಯಣದಂಧಕಾರದ ಗುರಿ ಎತ್ತರದ ಬೆಳಕು
ಬದುಕ ಭೂಮಿಕೆಯಲಿ ಒಗೆದೆಯೆನ್ನ ಅಯ್ಯಾ
ನಾನಿನಗೆ ಬೇರು ನೀ ನನ್ನ ಆಕಾಶ ಶ್ರೀರಘುವೀರೇಶ್ವರ. (೧೮)

ಕಾಯದ ಕಡೆಗೋಲು ಜನನಮರಣದ
ಮಥನದಲಿ ಹುಟ್ಟಿಸಿದೆ ಆಶೆಯ ಹಾಲಾಹಲ
ಅಮೃತವೆಂದೆಣಿಸಿ ವಿಷಯಸುಖ ಬಯಸಿ
ವಿಷಯಕಂಠನಾಗಿಹೆನಯ್ಯಾ ಭಯದ ಸರ್ಪವ
ಮುಟ್ಟಿಸಿ ವಿಷವನಳಿದು ನಿನ್ನತಿಶಯದ
ಮತಿಗಂಗೆಯಲಿ ಮೀಯಿಸಿ ಮಹಾಪ್ರಸಾದವನಿತ್ತು
ಹರನೊಲುಮೆಯಲಿ ಹರಸೆನ್ನ ಶ್ರೀರಘುವೀರೇಶ್ವರ.(೧೯)

ಗರಡಿಮನೆಯಲಿ ಮಲ್ಲ ಬೆವರಿಳಿಸಿ ಮಟ್ಟಿಗೆ
ಪಟ್ಟುವರಸೆಗಳ ಕಲಿವನಲ್ಲದೆ ಬೊಜ್ಜುಗಳಿಸುವನೆ?
ಜಗದ ಗರಡಿಯಲಿ ಇಂದ್ರಿಯಂಗಳ ಮರ್ದಿಸಿ
ನಿನ್ನರಿವ ಸಿರಿಗೊಡೆಯನಾಗದೆ ಭೋಗಿಯಾಗುವೆನೆ? ಅಯ್ಯಾ,
ಎನ್ನ ಕಾಯ ಕರಣಗಳ ಉಪಕರಣಗಳನಾಗಿಸಿ
ನಿನ್ನ ಮಾಯದಮುಸುಗಿನಾವರಣಗಳನಡಗಿಸಿ
ತ್ರಿಕರಣಶುದ್ಧಿಗೆಡೆಮಾಡೊ ತ್ರಿಪುರಾರಿ ಶ್ರೀರಘುವೀರೇಶ್ವರ. (೨೦)

ಕರ್ಮ ಕರೆವುದು ಇಂದ್ರಿಯಂಗಳಿಂದಲೆ
ಮಳೆಯ ಹದನಕೆ ಇಳೆ ಚಿಗುರುವಂದದಿ
ಬೆಳೆಯು-ಕಳೆಯೂ ಕೂಡಿ ಹಸಿರಹಾಸು
ಕೃಷಿಕ ಬಿಡುವನೆ ಕೆಡುಕು ಕಳೆಯ? ಅಯ್ಯಾ
ಅಂತರೀಕ್ಷಣೆಯಿಂದಲಿ ಚಿತ್ತದೊಳುದಿಪ
ಉತ್ತಮವನುಳಿಸಿ ಅಧಮ ಭಾವವನಳಿಪುದೇ
ಇಂದ್ರಿಯಮರ್ದನ ಮಾರ್ಗವು ಶ್ರೀರಘುವೀರೇಶ್ವರ. (೨೧)

ಪ್ರಕೃತಿಗೆ ಮನಸೋತು ಗೋವಳರು ಮೈಮರೆತಿಹರು
ಕೊಳಲಗಾನವು ವದನಾರವಿಂದವು ಸೆಳೆಯುತಿವೆ
ಭಾವ ಚದುರಿವೆ ಚಿತ್ತಚೋರನ ವಿಚಿತ್ರಲೀಲೆಗೆ
ಎತ್ತರದ ಬದುಕಿಗೆ ನೂರೊಂದು ಸವಾಲು, ಅಯ್ಯಾ
ಏರಬೇಕೆಂಬಾಸೆಗೆ ಹಲವಾರು ಅಹವಾಲು
ಆಶಾಕೌರವರು ಭಾವಗ್ರಹಣವೆಸಗೆ ನಾನಿರುತ್ತರಕುಮಾರ
ನೀನು ಸಾರಥಿಯಾಗುವತನಕ ಶ್ರೀರಘುವೀರೇಶ್ವರ. (೨೨)

ಇನನ ಕಿರಣವೇ ಸೇತುವೆಯಾಗಿ
ಜಲವು ಮೋಡವಾಗುವ ಪರಿ
ಮತ್ತೆ ಮಳೆಯಾಗಿ ಭುವಿಯ ಸೇರುವಂದದಿ
ಬಂಧ ಸಂಬಂಧಗಳು ಒಡೆದು
ತೊಡಕಾಗಿ ಮರು ಬೆಸೆಗೊಂಬುವು
ನಾನುನೀನಂತೆ ಒಡೆದಿಹೆವು ಅಯ್ಯಾ,
ಮತ್ತೆ ಸೇರುವೆವೆಲ್ಲಿ ಶ್ರೀರಘುವೀರೇಶ್ವರ? (೨೩)

ಪಶು ತನ್ನ ಸಂತತಿಯ ಸಲಹುವುದು
ಮೊಲೆವಾಲನಿತ್ತು ಶಿಶುವ ಸಂತೈಪುದು
ಮರಿಯೇನು ಮಗುವೇನು ಭೇದವುಂಟೆ?
ವಾತ್ಸಲ್ಯದೊರತೆ ಹರಿವ ಝರಿಯಂತೆ, ಅಯ್ಯಾ
ಚಿತ್ತದೊಳಾಶೆಯನು ಬಿತ್ತದೊಳು ಬಿಳಲನ್ನು
ಬಿತ್ತಿ ಸತತಕೃಷಿಯನು ಗೈವ ನಿನ್ನ
ಪ್ರೀತಿಯ ಪಾಲೆನೆಗೆ ಸಾಕು ಶ್ರೀರಘುವೀರೇಶ್ವರ. (೨೪)

ಅರಮನೆಯ ತಾಟು ಗುಡಿಸಿಲಿನ ಗಂಗಾಳ
ತಿನ್ನುವುದದೇ ಅನ್ನ, ತರತಮ ಪಾತ್ರೆಯಲಿ
ಸೂತ್ರಸ್ರೋತದಲ್ಲಿ ಭೇದವುಂಟೆ ಅಯ್ಯಾ?
ಗೋತ್ರಸೂತ್ರಗಳು ಬಿರುದು ಬಾವಲಿಗಳು
ಒಡೆತಡೆಯ ಗೋಡೆಗಳು ಬೇಡಿಗಳು
ಒಳಗಣ ಬೆರಗಿಗೆ ಅಡೆತಡೆಗಳುಂಟೆ?
ಎಲ್ಲರೊಳು ಎಲ್ಲದಲು ನೀನೇ ಶ್ರೀರಘುವೀರೇಶ್ವರ. (೨೫)

ಹರಿಯುತಿರೆ ಹರ್ಷ ಸಂತಸವಹುದು
ನಿಂತ ಮಡಿಲದು ದುಃಖವಹುದು
ನೆಲೆಯ ಕಾಣದವನೆ ನಿಜಯೋಗಿ
ನಡೆಯಲ್ಲೇ ಹರ್ಷದ ಬೇರು ಅಯ್ಯಾ
ಕುಳಿತಲ್ಲೇ ಚಿಂತೆಯ ಬಿಳಲು
ನೆಲೆದಪ್ಪಿ ತಿರುಗುವಂದದಿ ಮಾಡು
ನಿನ್ನತ್ತ ನಡೆವುದೇ ಹರ್ಷ ಶ್ರೀರಘುವೀರೇಶ್ವರ. (೨೬)

ಅಮ್ಮ ತೋರಿದ ಗುಮ್ಮ ಸುಮ್ಮನಿರನು
ಕಾಡಿಹನು ಅನುದಿನವು ಅವಿತುಗುಮ್ಮ
ಎಚ್ಚರಿದ್ದರಿಂದ್ರಿಯಗಳಲಿ ಇರಿಯುವನು
ಮಲಗಿರಲು ಕನಸಿನಲಿ ಕಾದುವನು ಅಯ್ಯಾ
ಬದುಕಿರಲು ಸಾವಾಗಿ ಭಯವಾಗಿ
ಸತ್ತಿರಲು ನೆನಪಾಗಿ ನಂಜಾಗಿ ಕಾಡಿಹನು
ಎಡೆಬಿಡದೆ ಕಾಪಿಡೊ ಎನ್ನ ಶ್ರೀರಘುವೀರೇಶ್ವರ. (೨೭)

ಬದುಕು ಸಾವಿರದ ಕಥೆ, ಪ್ರತಿ
ರಾತ್ರಿ ನಾಳೆಯ ಕನಸು ಒಂದು
ನಾ ಬದುಕುವೆನೆಂದು ಎಂದೂ
ತಿರುವೆಲ್ಲ ಹಾರುವ ಕುದುರೆಯ ಕೀಲು
ಜೀವನಯಾನ ಸಿಂದಬಾದನ ಯಾತ್ರೆ
ಮಂತ್ರದುಂಗುರವ ತಿಕ್ಕಿದರೇನು ಅಯ್ಯಾ,
ನಿನ್ನರಿವ ತಂತ್ರ ಕೈವಶವಹುದೆ ಶ್ರೀರಘುವೀರೇಶ್ವರ? (೨೮)

ಬದುಕೆಲ್ಲ ಘಟಶ್ರಾದ್ಧ, ಜೀವಂತ ಆಸೆಗಳ
ಹೂತಿಹೆವು ಬಯಕೆ ಚಿಗುರುಗಳ ಸುಟ್ಟಿಹೆವು
ನಿಡುಸುಯ್ವ ಮಸಣಮಂತ್ರಕ್ಕೆ ಕಣ್ಣೀರ ತರ್ಪಣ
ನಡೆದಿದೆ ನಡುವೆ ಮುಳ್ಳಚುಚ್ಚುವ ಮೋಡಿ
ನಾವೆಲ್ಲ ಮಾಟದ ಮರುಳರೊ ಅಯ್ಯಾ
ಜಲ ತಿಲ ತಂಡುಲ ತತ್ತ್ವಗಳ ಭ್ರಮರ
ಢಮರುನಾದಕೆ ನರ್ತಿಪ ಶ್ರೀರಘುವೀರೇಶ್ವರ. (೨೯)

ಖಗವೇನು ಮೃಗವೇನು ನರನೇನು ಜಗವ್ಯಾಪಿ
ಪ್ರೀತಿಯಾವರಣ, ಸತ್ತ ಮರಿಯನು ನೆಕ್ಕಿ
ದುಃಖಿಸುವ ನಾಯ ಊಳಾಟ ಶಿಶುವ ಕುಣಿಗಿಡುವ
ತಾಯ ನರಳಾಟಕಿಂತ ಭಿನ್ನವೇ ಅಯ್ಯಾ?
ಹಸಿವ ಮರೆಸುವುದು ಬೆದೆಯ ಮೆರೆಸುವುದು
ಎದೆಯ ದ್ರವಿಸುವುದು ಕಣ್ಣೀರ ಹರಿಸುವುದು ನೀ
ಜಗದೊಳಡಗಿಸಿಹ ಪ್ರೀತಿ ಶ್ರೀರಘುವೀರೇಶ್ವರ. (೩೦)

ನಂಬಿದೆನು ಪಿತ-ಮಾತೆಯರ ಸತಿಸುತರ
ತಿಂದುಂಬವರೆಗೆ ತಿರೆಯು ಮೆರೆಸಿತೆನ್ನ
ಕಾಲ ಕರೆಯುವೊಡೆ ಪೊರೆವರಾರೆನ್ನ ಅಯ್ಯಾ?
ಶರಧಿಯಧಿಕವಿದೆ ಮುಳುಗುವಪಾಯವಿದೆ
ನಂಬಿಕೆಯ ಅಂಬಿಗನು ಕಡಲದಾಟಿಸುವನಂತೆ
ಅಶೋಕವನದಲಿ ಸೀತೆಯ ನೆನಪಿನಂತೆ
ಅಂಬಿಗನು ನೀನೆನಗೆ ಶ್ರೀರಘುವೀರೇಶ್ವರ. (೩೧)

ಬುದ್ಧಿಯಳೆದಿದೆ ಭೂಗೋಳ, ಸಿದ್ಧಿಯದು
ಸಾಧಿಸಿದೆ ಸಕಲ ಭೋಗಗಳ, ಪ್ರಸಿದ್ಧಿ
ಕಿರೀಟಧಾರಣೆ ನಡೆದಿದೆ ನಿತ್ಯ
ಸಮರಾರಿಹರೆನಗೆತುಳುಕಿದೆ, ಅಯ್ಯಾ
ಅಹಂ ಮದಕೆ ಅಂಕುಶ ಮಹಾಕಾಲ
ಸೊಕ್ಕುಸುಕ್ಕಾಗಿ ಮಾನ ಮುಕ್ಕಾಗಿ ಬೀಳುವ
ಮುನ್ನ ಆಧರಿಸೆನ್ನ ಮುಕ್ಕಣ್ಣ ಶ್ರೀರಘುವೀರೇಶ್ವರ. (೩೨)

ಭೋಗಮೆರೆದ ಶುನಕ ಬೀದಿಯಳೆವಂತೆ
ಕಂಡಕಂಡವರ ಕುಟುಕಿ ಬೊಗಳಿದಂತೆ
ಕಾಯಕಡುವಿರುವಾಗ ತಿರೆಯ ತಿರುಗಿದೆ, ಅಯ್ಯಾ
ಭವಿ-ಭಕ್ತರು ಒಂದೆಂಬಂತೆ ತೆಗಳಿದೆ
ನಡುಬಾಗಿ ಇಂದ್ರಿಯಂಗಳು ಸೊರಗೆ
ತೊರೆದ ನಾಯಾದೆ, ಬೀದಿಪಾಲಾದೆ
ಕೃಪೆಯ ತುಣುಕಿತ್ತು ಪೊರೆಯೆನ್ನ ಶ್ರೀರಘುವೀರೇಶ್ವರ. (೩೩)

ಹೂವನರಸುವ ದುಂಬಿ ಸಂಗ್ರಹಿಪ
ಸಿಹಿಯ ಬಿಂದುವದು ಕೀಟದೆಂಜಲು
ಜೇನ ಸಿಹಿಯದು ಎಂಜಲೆ ಅಯ್ಯಾ?
ನಿನ್ನನರಸುವ ನಾನು ಸೊಗಯಿಪ
ಜಗದ ಸೊಬಗದು ನಿನ್ನೆಂಜಲು ಕಾಣಾ
ನಿನ್ನಿರವು ಎನ್ನೊಳಗೆ ಎಂಜಲೇನಲ್ಲ
ನಾ-ನೀ ಭೇದವೇ ಎಂಜಲು ಶ್ರೀರಘುವೀರೇಶ್ವರ. (೩೪)

ದಕ್ಷಯಜ್ಞದಿ ದಹಿತ ಸತಿಯನು
ಶಿವನು ಮರಳಿ ಪಡೆದನಂತೆ
ಅನಂಗನ ಸುಟ್ಟವಗೆ ಅಂಗದಾಶೆಯೆ ಅಯ್ಯಾ?
ಮಂಗಮನಸಿನ ಎನಗೆ ಸತತ
ಅನಂಗನಲದ ಪರೀಕ್ಷೆ ಬಿಡದೆ
ಕಾಡುವನು ಸುಡದೆ ನೋಯಿಪನು
ಚಿವುಟೆನ್ನ ತಲೆಯ ಶ್ರೀರಘುವೀರೇಶ್ವರ. (೩೫)

ಕನಸ ಕಾಣುವನು ಭೋಗಿ, ಅದ
ಮನಸಿನಾಟವೆಂದು ಜರಿಯುವನು ಯೋಗಿ
ಕನಸು ಮನಸಿನಾಟದ ಜಗವು, ಅಯ್ಯಾ
ನಿಜ-ಸೆಟೆಯ ಮರುಳಾಟ ನರಳಾಟ
ತೊಟ್ಟಿಲ ಜೋಗುಳದಿ ಮಸಣರೋದನ
ನಿಜದೊಳಸತ್ಯವ ಸಾವಿನೊಳುಜನನವ
ಬಿತ್ತಿ ಬೇರ್ಪಡಿಸುವ ನಮ್ಮ ಶ್ರೀರಘುವೀರೇಶ್ವರ. (೩೬)

ಬದುಕ ಮೆರವಣಿಗೆಯಲಿ ಮದು
ಮಕ್ಕಳರಿಯರು ಮುಗುದ ನಗೆಯ
ಹಿಂದಣ ವಿಧಿಯ ಕುಹಕವನು, ಅಯ್ಯಾ
ಮಾಲೆ ಧರಿಸಿದ ಮಾರಿದಿಬ್ಬಣದ
ಕೋಣ ಬಲ್ಲುದೆ ಕಡುಗತ್ತಿಯೇಟ?
ಜಗದ ನಗೆಯ ಹಿಂದಿದೆ ವಿಕಟಹಾಸ
ಬಿಡಿಸೆನ್ನ ನಗೆಯಹೊಗೆಯಿಂದ ಶ್ರೀರಘುವೀರೇಶ್ವರ. (೩೭)

ನೋಟಮಾಟದ ಸರಿಯೇನು ಬೆಸವೇನು
ಜಗದ ಚಿತ್ರವದು ತಲೆಕೆಳಗು ಕಣ್ಣೊಳಗೆ
ಅಸ್ಪಷ್ಟತೆಯ ಮಂಜು ಹೊರಗೊ-ಒಳಗೋ, ಅಯ್ಯಾ
ಸ್ಠೂಲದೊಳೀ ಬೆರಗ ವಿಚಿತ್ರಮಾದೊಡೆ
ಸೂಕ್ಷ್ಮದೊಳೆಂತಿರಲಹುದು ಚಿತ್ರವಿಚಿತ್ರಣ
ಸರಿಬೆಸದ ನಡುವಣ ದಿಟಚಿತ್ರವನು
ಬಿಡಿಸೆನ್ನ ಅಂತಃಕರಣದೊಳಗೆ ಶ್ರೀರಘುವೀರೇಶ್ವರ. (೩೮)

ಕಟುಕನ ಪ್ರೀತಿಯದು ಕುರಿಯು ಕೊಬ್ಬಲಿಯೆಂದು
ಮುದ್ದಿಸಿ ಮೈದಡವಿ ಮೇವಿತ್ತು ನೇವರಿಸಿ
ತುಪ್ಪಳವ ಹೆರೆದು ಮಾರುವನು, ಅಯ್ಯಾ
ಕಡೆಗೆ ಕತ್ತು ಕತ್ತರಿಸಿ ತೂಗಿ ವಿಕ್ರಯಿಪ
ಇವನ ಪ್ರೀತಿಯ ಹೆಣವದು ಮಣದ ಲೆಕ್ಕ
ಇಹದ ಪ್ರೇಮದ ಪರಿಯು ಇರಿಯುತಿರೆ
ಪೊರೆಯೆನ್ನ ನಿಜಪ್ರೀತಿಯಲಿ ಶ್ರೀರಘುವೀರೇಶ್ವರ. (೩೯)

ಅಣುಕಣದ ಬಂಧವದು ಬಿಗಿದು
ಹಿಡಿದಿದೆ ಜಗವ ಗಂಟುನೆಂಟಿನಲಿ
ಅಂತಃಕರಣದ ಬಂಧ ಮಿಗಿಲಹುದು, ಅಯ್ಯಾ
ಬಂಧಿಪುದು ಎನ್ನನು ಸೂತ್ರಗಳಲಿ
ಭಾವದರಮನೆಯ ಸೊಬಗಸೆರೆಯಲಿ
ಗೋಳಸೂತ್ರವು ಬಾಳಸೂತ್ರವು ಒಂದೇ
ಲಘು-ಬಿಗಿಯ ಗುಟ್ಟ ತಿಳಿಸೊ ಶ್ರೀರಘುವೀರೇಶ್ವರ. (೪೦)

ಮುಗುದತೆಯಲಿ ನಗುವುದು
ಶಿಶು ಬೆರಳ ಚೀಪುವುದು
ಭ್ರಮಿಸಿ ನೆರಳಾಟವಾಡುವುದು ಅಯ್ಯಾ
ಇರುಳದು ಹಗಲಗನಸ ಕಂಡಂತೆ
ಕೈಬಿಟ್ಟ ಪುಗ್ಗದೊಲು ಜಾರಿ
ಕರಗಿದ ಕನಸುಗಳ ನಿಟ್ಟುಸಿರು
ಭ್ರಮೆಯ ಹರಿಸಿ ಹರಸೆನ್ನ ಶ್ರೀರಘುವೀರೇಶ್ವರ.(೪೧)

ಬದುಕ ಸೊಗಸದು ಒಡೆವ ಗುಳ್ಳೆ
ನೋವ ಬಸಿರದು ಹೆರುವ ಗಾಯ
ಮತ್ತೆ ಬರದಿರಲಿ ಬಾಳು, ಅಯ್ಯಾ
ಸುತ್ತುತಿದೆ ಗಿರಗಿಟ್ಲೆ ತಿರೆಯ
ಬದುಕಿದು ಸರಿಸರಿವ ಚಿತ್ರ
ನಾ-ನೀನು ಕುಳಿತ ಕೀಲುಕುದುರೆ
ತಿರುಪ ನಿಲಿಸಿ ಎತ್ತಿಕೊಳ್ಳೆನ್ನ ಶ್ರೀರಘುವೀರೇಶ್ವರ. (೪೨)

ಆಕಾರ ಗೋಳವಾದೊಡೇಂ ಭುವಿಯ
ಬಾಳದು ಬರಿಯ ಗೋಳಾಗಲೇಕೆ?
ಅರ್ಥವಾವುದರೊಳಗಿಲ್ಲ ಬೆದಕದಿರು ಅಯ್ಯಾ
ಕೌತುಕದ ಗೋಲಕವು ಒಡೆಯದಂತದನು
ಈಕ್ಷಿಸು, ಕಂಬನಿಯ ಕೊನೆಯಲಿದೆ
ಬಣ್ಣದ ಕಾಮನಬಿಲ್ಲು, ಕಾಣದದು
ಬರಿಗಣ್ಗೆ ಒಳಗಣ್ಣ ನೀಡೆನಗೆ ಶ್ರೀರಘುವೀರೇಶ್ವರ. (೪೩)

ನಾಳೆ ನಿನ್ನೆಯ ಬೆಳಕು
ನಿನ್ನೆ ಇಂದಿನ ನೆರಳು
ನೆರಳುಬೆಳಕಾಟ ಬದುಕೆಲ್ಲ, ಅಯ್ಯಾ
ಕಾಣುವೆವು ಕನಸುಗಳ
ಬಣ್ಣಿಪೆವು ಬಯಕೆಗಳ
ಕಣ್ಣಬಣ್ಣದ ಬೆಳಕು ಆರುವನಕ
ನೀನೆನ್ನ ಇಂದು ಬೆಳಕು ಶ್ರೀರಘುವೀರೇಶ್ವರ. (೪೪)

ತಳ ಒಡೆದ ದೋಣಿಯಲಿ ಬಾಳ
ಪಯಣ, ನಂಬಿಕೆಯ ದ್ವೀಪದ
ಲಂಗರಿಗೆ ಹಂಗಿನ ಹಗ್ಗವು ಅಯ್ಯಾ
ಬಯಕೆ ತೆರೆಗಳ ನಡುವೆ
ವಾಂಛೆಗಳ ಹುಲಿಮೀನು
ಆರ್ಭಟಿಸಿ ಬೆದರಿಸುತಿರೆ
ಕಾಲರಂಧ್ರಕೆ ನಿನ್ನರಿವೆ ತೇಪೆ ಶ್ರೀರಘುವೀರೇಶ್ವರ. (೪೫)

ದೃಷ್ಟಿದೋಷಗಳೆರಡುಂಟು, ಸರಿಪಡಿಸೆ
ಮಸೂರದಾರಿಗಳೂ ಉಂಟು
ಒಳಗಣ್ಣ ನೋಟವನೆಂತು ಸರಿಗೊಳಿಪೆ ಅಯ್ಯಾ?
ಜಗದ ಸಾಮೀಪ್ಯವದು ಸೆಳೆಯುವುದೆನ್ನನ್ನು
ದೂರದೋಷವು ಮರೆಸುವುದು ನಿನ್ನನ್ನು
ಇಂತಿರ್ಪುದಯ್ಯಾ ಎನ್ನಕ್ಷಿದೋಷ
ನೀಡೆನಗೆ ನಿನ್ನ ಹಣೆಗಣ್ಣ ಶ್ರೀರಘುವೀರೇಶ್ವರ. (೪೬)

ಪಂಚೇಂದ್ರಿಯದನುಭವಗಳೂಟ
ಹೃದಯಗತವಾಗಿಪುದು ಬದುಕ
ಕಣ್ಣ ನೋಟವದು ಹೃದಯ ಕಲಕದೆ ಅಯ್ಯಾ?
ಮನುಜ ಸಂತತಿಗೆ ಮಾಪಕವಿದು
ಕರುಣಪ್ರೀತಿಯದು ದ್ರವಿಸದಿರೆ
ಖೂಳಪ್ರಾಣಿಯು ನೀ, ಮನುಜನಲ್ಲ
ಮನುಜನ್ನ ಮಾಡೆನ್ನ ಶ್ರೀರಘುವೀರೇಶ್ವರ. (೪೭)

ಅಕ್ಕರದ ಸೊಗಸದುವೆ ಭಾವಕ್ಕೆ
ಸಿಹಿಯೂಟ ಓದು-ಬರಹಗಳೆಲ್ಲ
ರಸಸೃಷ್ಟಿ ಕವಿಚಮತ್ಕಾರ, ಅಯ್ಯಾ
ಸಹೃದಯರೆದೆಯಲ್ಲಿ ಭಾವಾವಿಭಾವ
ಕನ್ನಡಿಯ ಪ್ರತಿಫಲನದಂತೆ
ಎಲ್ಲ ರಸದೈಕ್ಯ ಶಾಂತರಸದೊಳಗೆ
ನಾನೈಕ್ಯ ನಿನ್ನೊಳಗೆ ಶ್ರೀರಘುವೀರೇಶ್ವರ. (೪೮)

ಕಣ್ಣರಿಯದಿರ್ದೊಡೆ ಕರುಳರಿವುದೆಂಬರು
ನೋಟದೊಳು ಹಸಿವು ಇತ್ತೆಂಬರು
ಆಕ್ರಂದನದೊಳು ಅಂತಃಕರಣವು ಅಯ್ಯಾ
ಅರಿವು ಕಣ್ಣೊಳಗೂ ಇಲ್ಲ ಕರುಳಲೂ  ಇಲ್ಲ
ಹಸಿವು ನೋಟದೊಳೊ ಹೊಟ್ಟೆಯೊಳೊ ಇಲ್ಲ
ಇಂದ್ರಿಯಗಳರಿವು ಇತಿಮಿತಿಯೊಳಗೆ
ಅಮಿತಪ್ರಜ್ಞೆ ನೀನು ಎನ್ನೊಳಗೆ ಶ್ರೀರಘುವೀರೇಶ್ವರ. (೪೯)

ಗುಡಿಯಲಿ ದೇವನಿಹನೊ ಇಲ್ಲವೊ
ಪೂಜಾರಿಯ ಕೇಳಲೇಕೆ? ಮಡಿಯಲಿ
ಮುಕ್ತಿಯಿಹುದೊ ಇಲ್ಲವೊ ಆಚಾರಿಯ
ಕೇಳಲೇಕೆ? ಅಯ್ಯಾ, ನುಡಿಯಲಿ
ಪ್ರೀತಿಯಿರೆ ಮಂತ್ರದಲಿ ಶಕ್ತಿಬಾರದೆ?
ನಡೆಯದು ಶುದ್ಧವಿರೆ ಮುಕ್ತಿಮಾರ್ಗ ಬೇರುಂಟೆ?
ನಡೆನುಡಿಯಿರದವರ ಕಂಡು ನಗುವ ಶ್ರೀರಘುವೀರೇಶ್ವರ. (೫೦)

ಅಳತೆಗಳು ಹಲವುಂಟು ಘನಕೊಂದು
ಸೊಲಗೆ ಚಟಾಕು ಪಾವು ಸೇರು
ನಡೆಗೊಂದು ಗಜ ಮೈಲಿ ಯೋಜನ ಅಯ್ಯಾ
ದ್ರವಕೊಂದು ಡರಾಮು ಆಧುನಿಕ
ಕೆ.ಜಿ ಮಿಲಿ ಮೀಟರು ಲೀಟರು ಮಾಪಕ
ನನ್ನೆದೆಯ ನಿನ್ನೆದೆಯ ನಡುವಣಂತರವ
ಅಳೆವ ದಂಡವದಾವುದು ತಿಳಿಸೊ ಶ್ರೀರಘುವೀರೇಶ್ವರ. (೫೧)

ಅಂಡದೊಳು ಆಶಯವನಿಟ್ಟೆ
ಬೀಜದೊಳು ಬಯಕೆಯನಿಟ್ಟೆ ಅಯ್ಯಾ
ಹೊಟ್ಟೆಯೊಳು ನೆಟ್ಟೆ ವೃಷಣದಲಿ ಬಚ್ಚಿಟ್ಟೆ
ಹೂಹಣ್ಣಾಗಿಸಲು ಪುಷ್ಪಪರಾಗದೊಲು
ಅನುರಾಗ ಮಾರುತವ ಛೂ ಬಿಟ್ಟೆ
ಪುರುಷ-ಪ್ರಕೃತಿಯೆದೆಯೊಳಗಣ ಚಿಟ್ಟೆ
ವಿಲಪಿಸಿ ಪಟಗುಟ್ಟೆ ಕೈತಟ್ಟಿ ನಗುವೆ ಶ್ರೀರಘುವೀರೇಶ್ವರ. (೫೨)

ಕಾಮವದೆಂದು ಹೀಗಳೆಯಲೇಕೆ?
ತಿದಿಯುಸಿರು ಕಾಯಿಸುವುದು ಕಬ್ಬಿಣವ
ಬಡಿಯಲದಷ್ಟೆ ಕಾವು ಅಯ್ಯಾ
ಕಾಯ-ಕಾಯದುಸಿರು ಬೆರೆತಾಗ
ಬದುಕು ಬೆವರಿಟ್ಟ ಘಳಿಗೆಯಲಿ
ಕೌತುಕದ ಶಿಶು ಜನನ ಕೆದಕದಿರು
ಮೂಲವನು ಆದಿಕೌತುಕ ನೀನು ಶ್ರೀರಘುವೀರೇಶ್ವರ. (೫೩)

ಸೃಜಿಸಲು ಪರಮೋಪಾಯ ಕಾಮಕೌತುಕವು
ಋಷಿಯೇನು ಮುನಿಯೇನು ನಾನುನೀನೇನು
ಮನ್ಮಥನ ಹೂಬಾಣ ಮೊನಚು ಸಮವೆಲ್ಲರಿಗೆ ಅಯ್ಯಾ
ಬಡಿದ ಕಬ್ಬಿಣವೆಲ್ಲ ಕಡುಗತ್ತಿಯಾದೀತೆ?
ಕೂಡಿದ ಕೂಟವೆಲ್ಲ ಫಲವಪ್ಪುದೆ
ಅಂಡದೊಳು ಬಂಜೆತನ ವೀರ್ಯದೊಳು ಷಂಡತನ
ನೀನಿಟ್ಟೆ ಜಗಭಂಡ ನೀನು ಶ್ರೀರಘುವೀರೇಶ್ವರ. (೫೪)

ಮಯೂರ ನರ್ತನಕೆ ಮೋಡಕವಿದಂತೆ
ಬೆದೆಯೇರಿ ಜೀವ ಹೆದೆಯೇರಿ
ಆಸೆ ಗರಿಗೆದರುವಲ್ಲಿ ಬಯಕೆ
ಗುರಿಸೇರುವಲ್ಲಿ ಕದಡುವುದು ಅಯ್ಯಾ
ಮೋಡ ಚದುರುವುದು ಅದುರುವುದು ನಡೆ
ಪಾರ್ಥನ ಷಂಡತನದಂತೆ ಕುಂತಿಯ ಬಂಜೆತನದಂತೆ
ಎಲ್ಲರೂ ಸೂರ್ಯಮುಖಿ ಸೂತಪುತ್ರರೇ ಶ್ರೀರಘುವೀರೇಶ್ವರ.(೫೫)

ಕಾಮವದೆಂದು ಕಡೆಗಣಿಸಲೇಕೆ?
ಜಗವು ಜೀವನವು ನಡೆವುದೇ ಅದರಿಂದ
ಉಪ್ಪುದಿನಸಿಗಳನೆಲ್ಲ ಅಟ್ಟದಲಿ ಕಟ್ಟಿಡೆ
ಅಟ್ಟುಣ್ಣುವುದೇನನ್ನು? ಅಚ್ಯುತನ ಆದೇಶ ಅಯ್ಯಾ
ಧರ್ಮಾರ್ಥಯುಕ್ತ ಕಾಮವೂ ತಾನೆಂದು
ಪ್ರಣಯವೂ ಪ್ರಣವವೇ ಪ್ರಾಜ್ಞಮಿತಿಯೊಳಗೆ
ಪ್ರಾಣಪತಿ ನೀ ಕಾಮಸತಿ ನಾ ನಡೆಯಲೀ ಕೇಳಿ ಶ್ರೀರಘುವೀರೇಶ್ವರ. (೫೬)

ಲೋಕದಾಟಕೆ  ಹೆಣ್ಣು-ಗಂಡೆರಡು
ಜೀವವ್ಯಾಪಾರಕೆ ಅಳತೆ ಪಾವು ಸೇರು
ಇಂದ್ರಿಯಂಗಳೆಲ್ಲವು ಒಂದೇ, ಅಯ್ಯಾ
ಕಣ್ಣು ಕಿವಿಯಂತೆ ಜನನಕೊಂದಿಂದ್ರಿಯ
ಸಾವಿನ ಸಿರಿಮುಡಿಯೊ ಬದುಕ ಮುನ್ನುಡಿಯೊ
ರಾವಣದುಃಶ್ಯಾಸನರೊ ರಾಮರಾಮಕೃಷ್ಣರೊ
ಪರಿಣಾಮನೆತ್ತ ಚಿತ್ತಸೆಳೆದತ್ತ ಶ್ರೀರಘುವೀರೇಶ್ವರ. (೫೭)

ನಾಲಗೆಯ ಸೊಗಸದುವೆ ಚಪ್ಪರಿಸೆ
ಕರ್ಣಾನಂದ ಸಂಗೀತವನಾಲಿಸೆ
ವಿಹಂಗಮವು ನೋಟ ಕಣ್ಗೊಪ್ಪೆ, ಅಯ್ಯಾ
ರತಿಯಲಿ ಮಾತ್ರ ವಿರತಿಯದೇಕೆ?
ಅಂಗಸತಿ ಲಿಂಗಪತಿಯನೊಪ್ಪದ
ಮಂಗಮತಿಗಳು ಸಾಧಕರಲ್ಲಯ್ಯ ಡಾಂಭಿಕರು
ಸಮಚಿತ್ತದ ಸಮಭೋಗದ ಸಿದ್ಧ ಶ್ರೀರಘುವೀರೇಶ್ವರ. (೫೮)

ಆವತಮಟೆಗಾದರೂ ಅದೇ ಚರ್ಮ
ಆವಮಡಕೆಗಾದರೂ ಅದೇ ಮಣ್ಣು
ಆಕಾರ ಬೇರೆಯಾದೊಡೇಂ ಆಶಯವೊಂದೇ ಅಯ್ಯಾ
ಹೆಣ್ಣು-ಗಂಡೆಂಬ ಭೇದ ಕವಲುಗಳು
ಆವತಮಟೆ ಬಡಿದರೂ ಅದೇ ಸದ್ದು
ಕೊಳಗಬಿಂದಿಗೆಯು ಧರಿಸುವುದದೇ ಜಲವ
ಅಳತೆಗಳವಡಿಕೆ ಅಂತಃಸತ್ತ್ವ ನೀನೇ ಶ್ರೀರಘುವೀರೇಶ್ವರ. (೫೯)

ನಾರಿ ನರಕಕೆ ದಾರಿ ಎಂಬುವಿರಾ?
ಶಯನದಲಿ ದಾಸಿ ಎಂಬುವಿರಾ?
ಭಲೇ! ಉದಾರಿಗಳಯ್ಯಾ ನೀವು!
ಕಾಯ ಪಣಕಿಟ್ಟು ಜೀವಧರಿಸಿದಳಯ್ಯ
ನಿಮ್ಮಯ ಹೇಲು-ಉಚ್ಚೆಗಳ ಸಹಿಸಿ
ಮೊಲೆವಾಲನಿತ್ತು ಸಂತೈಸಿ ಹೊತ್ತು
ಸಲಹಿದಳಯ್ಯಾ ತುತ್ತನಿಕ್ಕಿ, ಅವಳ
ತೊತ್ತಾಗಿ ಕಾಣುವ ನಿಮ್ಮೆದೆಗೆ ಎಡಗಾಲನಿಕ್ಕಿ
ಧಿಕ್ಕರಿಸುವನಯ್ಯಾ ಶ್ರೀರಘುವೀರೇಶ್ವರ.(೬೦)

ಹಗಲು ಸ್ವಚ್ಛಂದ ಹಾರಾಡಿ
ರೆಕ್ಕೆ ಮುದುಡಿದ ಹಕ್ಕಿ ಗೂಡಿನಲಿ
ಸಂಜೆ ವಿರಮಿಸುವಂತೆ, ಇಂದ್ರಿಯಂಗಳ
ಹರಡಿ ಹೋರಾಡಿದೆನು ಅಯ್ಯಾ,
ಇರುಳು ಕವಿದಿದೆ ಸುತ್ತ, ಹಾವು ಹಿಡಿಯುವ
ಮುನ್ನ, ಬೆಕ್ಕು ಕಡಿಯುವ ಮುನ್ನ ಆಧರಿಸೆನ್ನ
ನಿನ್ನುದಯಕೆ ಹಾಡಾಗಿಸೆನ್ನ  ಶ್ರೀರಘುವೀರೇಶ್ವರ. (೬೧)

ಸಿಂಪಿಯೊಳಗಿನ ಮಳಲೆಲ್ಲ ಮುತ್ತಲ್ಲ
ಜೀವದ ನೋವುಗಳೆಲ್ಲ ಪಾವಕವಲ್ಲ
ಮುತ್ತು ಒತ್ತುವಿಕೆಯ ಸುತ್ತಲ ಶಾಂತರಸ, ಅಯ್ಯಾ
ಪಾವಕತೆ ಶಿವಭಾವದೊಳು ನಲಿವ ನೋವು
ಭವದ ಸಿಂಪಿಯಲಿ ನಾನೆಂಬ ಕಣದ ಸುತ್ತ
ನಿನ್ನ ಮನನ ಧ್ಯಾನದ ರಸಲೇಪ ಅಹಂ
ಶಿವೋಹಂ ಆಗುವುದೀಪರಿ ಶ್ರೀರಘುವೀರೇಶ್ವರ. (೬೨)

ಅತಿ ಜಿಪುಣ ಗತಿ ನಿಪುಣ
ಕ್ರಯವಿಕ್ರಯದ ವ್ಯಾಪಾರಿ
ಕೊಡುಕೊಳುವ ಚತುರವಿಹಾರಿ, ಅಯ್ಯಾ
ಜೀವನ್ಮರಣಗಳ ಲೆಕ್ಕ, ಬದುಕ
ತೂಗುವ ಪಾಪ-ಪುಣ್ಯಶ್ರೇಷ್ಠಿ
ಗುಣಭಾಗಾಕಾರಿ ತ್ರಿಕೋನಮಿತಿ ಪರಿಣತ
ಅಗಣಿತದ ಗಣಿ ನೀನು ಶ್ರೀರಘುವೀರೇಶ್ವರ. (೬೩)

ಭಾವದೊಲುಮೆಗೆ ದ್ರವಿಸದವರಾರು?
ಶಿಲೆ ಸತಿಯು, ಕಪ್ಪೆ ರಾಜಕುವರನು
ಹೃದಯಸ್ಪರ್ಶಕೆ ಪರಿವರ್ತನೆಯು ಅಯ್ಯಾ
ಮೆಟ್ಟಿನಲಿ ಮಾಂತ್ರಿಕತೆ ಮುತ್ತಿನಲಿ ಮುಕ್ತಿರಸ
ಬೆರೆತಿರಲು ಬವಣೆ ನೀಗದಿರದು, ಬಾರೆನ್ನ
ಮೆಟ್ಟಿಬಿಡು, ಇಕ್ಕು ಮುತ್ತನೊಂದನು
ನೀನೆನ್ನ ಮಾಂತ್ರಿಕ ಮುಕ್ತಿದಾತ ಶ್ರೀರಘುವೀರೇಶ್ವರ. (೬೪)

ಮುಂಜಾವಿನ ಕೋಳಿ ಕೂಗು
ಬೆಳಕ ತುತ್ತೂರಿ, ದಿನದ
ಮೆರವಣಿಗೆಯ ಮೊದಲ ದನಿಯದು ಅಯ್ಯಾ
ಕೂಸ ಮೊದಲ ಅಳು
ಜೀವನದನಿಯ ಮುನ್ನುಡಿಯು
ಕೋಳಿಯರಿಯದು ಅರೆದ ಕಾರವ
ಜೀವವರಿಯದು ಸಾವ ಬರವ ಶ್ರೀರಘುವೀರೇಶ್ವರ. (೬೫)

ಕೋಟೆ ಕೊತ್ತಲವಿಕ್ಕಿ
ಸಿಂಹಾಸನಗಳ ಮೆಟ್ಟಿ
ಜಟ್ಟಿಗಳ ಕೆಡಹಿದರು ತೊಡೆ ತಟ್ಟಿ ಅಯ್ಯಾ
ಏನ ಮಾಡಿದರೇನು, ಏನ
ಗೆಲಿದರೇನು ಸಾವ ಗೆಲಬಹುದೆ?
ಎಲ್ಲರೂ ಹುಡಿಮಣ್ಣು ಹಿಡಿ ಬೂದಿ
ಬೂದಿಬಡಕ ಕಪಾಲಧಾರಿ ನಮ್ಮ ಶ್ರೀರಘುವೀರೇಶ್ವರ. (೬೬)

ನೆನಪ ಮರಳ ತೊರೆಯಿದು
ಬರಿಗಾಲ ನಡೆ ಬದುಕು
ನೆನಪು ನೋಯಿಸುವುದು ಹರಳಾಗಿ ಅಯ್ಯಾ
ಅಳಿಸುವುದು ಇಂದು ತೆರೆ
ನೆನ್ನೆಯದಿಲ್ಲ ಹೆಜ್ಜೆಗುರುತು
ಹಿಂದಿಲ್ಲ, ಮುಂದೆ ಪ್ರಶ್ನಾರ್ಥ
ಮೆರವಣಿಗೆಯ ಮದುವಣಿಗ ನೀ ಶ್ರೀರಘುವೀರೇಶ್ವರ. (೬೭)

ಬೊಗಸೆಯೊಡ್ಡಿದೆ, ಬೆರಗ ನೀಡಿದೆ
ತುಂಬದೀ ಜೋಳಿಗೆ ತಳವಿಲ್ಲ
ಬಾಯಿ ಬ್ರಹ್ಮಾಂಡ ನಿತ್ಯ ಹೆರಿಗೆಯಯ್ಯಾ
ಪುರುಡು ಮನೆಯಲಿ ಸೂತಕ
ಹುಟ್ಟಿನೊಂದಿಗೆ ಸಾವು ನಿಂತಿಹುದು
ಅದು-ಇದು ಒಂದೇ ಕಾರ
ನಾ ಬೊಗಸೆ ನೀ ಬೆರಗು ಶ್ರೀರಘುವೀರೇಶ್ವರ.(೬೮)

ಶಿಶು ಮಾತನಾಲಿಸುವುದು ದನಿ
ಅನುಕರಿಸಿ ಆಡುವುದು ತೊದಲ್ನುಡಿಯೊ
ಲಲ್ಲೆಮಾತೊ ಗೀತೆವೇದಾಂತವೊ ಅಯ್ಯಾ
ಅನುಕರಣೆಯೇ ಎಲ್ಲ ಭಾವ ಬೆಂಬತ್ತಿ ಭಾಷೆ
ಮೌನವರಿಯಲು ಶಬ್ದ, ಮಾತು
ಅರಿತ ಬಳಿಕದೇ ಮೌನ ಸಂವಹನ
ನಾ ಮಾತು, ನೀ ಮೌನ ಶ್ರೀರಘುವೀರೇಶ್ವರ. (೬೯)

ಸತಿಯ ಕೈಹಿಡಿವರು ಪರಗತಿಗೆ
ಸರಸದಲಿ ವಿರಸದ ವಿಷಬೀಜ
ಎಷ್ಟು ತೆಕ್ಕೈಸಿದರೇನು ಎರಡು ಒಂದಲ್ಲ ಅಯ್ಯಾ
ಅಹಂ ಶಿರವುರುಳಿ ಟಗರ ತಲೆ
ಚಿಗುರಿ ಕೈಮುಗಿದು ನಿಲ್ಲದಿರೆ
ಅರ್ಧನಾರೀಶ್ವರನ ದರ್ಶನವೆಂತು?
ಹರಿಯೆನ್ನ ಶಿರವ ಶ್ರೀರಘುವೀರೇಶ್ವರ. (೭೦)

ಸುರೆಯ ಕುಡಿವರು ಭಂಗಿ
ಸುಡುವರು ಮತ್ತ ಮತಿಗೇರಿಸಿ
ಜಗವ ಮರೆಯಲೆತ್ನಿಸುವರು ಅಯ್ಯಾ
ಕಾಮಕಾಂಚನದ, ಹೆಸರು
ಕೀರ್ತಿಯಧಿಕಾರದ ಮತ್ತರಿಹರು
ನಾನೂ ಮತ್ತನಿಹೆನಯ್ಯಾ ಸುತ್ತ
ಮರೆತಿಹೆನು ನಿನ್ನುನ್ಮತ್ತತೆಯಲಿ ಶ್ರೀರಘುವೀರೇಶ್ವರ. (೭೧)

ಕಾಗೆಗೂಡಿನಲಿ ಬೆಳೆದೊಡೇನು
ಹಾಡ ಮರೆವುದೆ ಕೋಗಿಲೆ?
ಜಗದಲಿಹ ಭಕ್ತರು ನಿನ್ನ ಮರೆವರೆ ಅಯ್ಯಾ
ಸಪ್ತವರ್ಣ ಅಡಗಿಹುದಂತೆ ಶ್ವೇತದಲಿ
ನೀನಡಗಿಹೆಯಯ್ಯಾ ದೇಹೇಂದ್ರಿಯಗಳಲಿ
ನಡೆಯಲ್ಲ ನಿನ್ನದೇ ನರ್ತನವು ನುಡಿಯೆಲ್ಲ
ಓಂಕಾರ, ನಾನಿಲ್ಲ ನೀನೇ ಎಲ್ಲ ಶ್ರೀರಘುವೀರೇಶ್ವರ. (೭೨)

ಬದುಕು ತೆರೆದಿಡದ ಸತ್ಯ
ಸಾವು ತೋರಿಪುದು ನಿತ್ಯ
ನದಿಯ ವಿಶಾಲತೆ ಸಾಗರದಿ ಅಯ್ಯಾ
ಅಣುವ ಪರಿಣಾಮ ಆಸ್ಫೋಟದಿ
ಶಬ್ದಾರ್ಥದರಿವು ಮೌನಾಂತರಂಗದಿ
ಮಾತು ಮರಣಿಸಿದೆಡೆ ಅರಿವಿನರುಣ
ನನ್ನಳಿವನಲ್ಲಿದೆ ನಿನ್ನ ಪ್ರಭೆ ಶ್ರೀರಘುವೀರೇಶ್ವರ. (೭೩)

ಜಗದ ಮಗ್ಗವಿದು ನೇಯುವುದು
ನಾನು-ನೀನುಗಳೆಲ್ಲ ದಾರಗಳು
ಮಾಯದ ನೇಕಾರ ಸೂತ್ರಧಾರನಯ್ಯಾ
ಒಲವಿಲ್ಲ ಸಿಡುಕಿಲ್ಲ ಪೋಣಿಸುತ
ಈಕ್ಷಿಸುತ ಕಡಿದೆಡೆಯೆಲ್ಲ ಸೇರಿಸುತ
ಅನವರತ ದುಡಿಯುವನು ದುಡ್ಡಿಗಲ್ಲ
ಕಾಯಕದ ಮಂತ್ರವಿದು ಶ್ರೀರಘುವೀರೇಶ್ವರ. (೭೪)

ಕಡಶೆಟ್ಟಿ ನೀಡಿಹನು ನಾಳೆಗಳ
ನೆನ್ನೆಗಳ ಸಾಲ ತೀರಿಸಲೆಂದೆ
ಪಿತ-ಮಾತೆ-ಸತಿ-ಸುತೆ-ಪುತ್ರ ಮಿತ್ರರೆಲ್ಲ ಅಯ್ಯಾ
ಋಣದ ಮೊತ್ತಗಳು ಚುಕ್ತ
ಬೇಡುವರು ಬಿಡದೆ ಕಾಡುವರು
ಮರಣ ದಫ್ತರದಿ ದಾಖಲಾಗಿದೆ ಲೆಕ್ಕ
ಋಣಮುಕ್ತಿ ನೀಡೆನಗೆ ಶ್ರೀರಘುವೀರೇಶ್ವರ. (೭೫)
( Kahlil Gibran: We often borrow from our tomorrows to pay our debts to our yesterdays. )


ಕುರುಳು ಶಿಖೆ ಜುಟ್ಟು, ಶಿರದ
ಸೊಬಗಿನ ಗುಟ್ಟು, ಅನಂಗನಾಟಕ್ಕೆ ಆಡೊಂಬಲವು
ಮುಂಗುರುಳುರುಳಾಯ್ತು ದುಷ್ಯಂತೆಗೆ ಅಯ್ಯಾ
ಮುಡಿಯುಡಿಯ ಹರಿಯಿತು ದುಃಶ್ಶಾಸನಗೆ
ಬಿರಿದ ಜುಟ್ಟು ಮರಣಶಾಸನ ನಂದರಿಗೆ
ಪಾವನಗಂಗೆಯ ಧರಿಸುವ ಮೆಟ್ಟಿಲಾಗಿಸೆನ್ನ
ಮುಡಿಯ ನಿನ್ನಂತೆ ಶ್ರೀರಘುವೀರೇಶ್ವರ. (೭೬)

ರಾಜಕುವರಿಯ ಮುತ್ತೊ
ಸರ್ಪದಂಷ್ಟ್ರದ ತುತ್ತೊ
ಎಲ್ಲರೂ ಕಪ್ಪೆಗಳೇ ಅಯ್ಯಾ
ಕಾಲ ಕಾರಣ ಪರಿಣಾಮ
ಕರ್ಮದಲುಗಿನ ಗುರಿ ಕೇಂದ್ರ
ಮುದ್ದಿಪುದು ಘಾತಿಪುದು
ಹೆಡೆಯ ಕೊಡೆಯಾಗಿಸಿ ಕಾಪಿಡೊ ಶ್ರೀರಘುವೀರೇಶ್ವರ. (೭೭)

ಆಹಾ!
ಕಮಲವಾಸಿಯು ಅವನು
ಶೇಷಶಾಯಿಯು ಇವನು
ಮಸಣವಾಸಿಯು ನೀನು ಅಯ್ಯಾ
ನಿಮ್ಮೀ ಮೂವರ ಮನೆಯಾಟ
ನಮ್ಮನನ್ನವರತ ಕಾಡುವ ಕಾಟ
ಇದರಿಂದೇನ ಸಾಧಿಸುವಿರಿ ತ್ರಿಮೂರ್ತಿಗಳೆ?!
ಸಾಕಿ ಸಾಕಿನ್ನು ಸ್ವೀಕರಿಸೆನ್ನ ಶ್ರೀರಘುವೀರೇಶ್ವರ. (೭೮)

ಬದುಕಿದೇನಿದು ಗಡಿಯಾರದ ನಡಿಗೆ
ಅವಸರಕೆ ಕಾರಣವಿಲ್ಲದೆಯೂ ಆವೇಗ
ಬಡಬಡಿಕೆ ಬಡಿವಾರವೀ ಸಂಸಾರ ಅಯ್ಯಾ
ಎಷ್ಟು ಸುತ್ತಿದರೇನು ಮುಗಿಯದೀ ಪಯಣ
ಅದೇ ತಿರುವು ಅದೇ ಕೈಮರ
ಹೊತ್ತಿನ ತೊತ್ತುಗಳೆಲ್ಲರೂ ಅಯ್ಯಾ
ಕುತ್ತಬಿಡಿಸಿ ನಿನ್ನತ್ತ ತಿರುಗಿಸೆನ್ನ ಶ್ರೀರಘುವೀರೇಶ್ವರ. (೭೯)

ಲೇಖನಿಯು ದ್ರವಿಸುವುದು ಶಾಯಿಯನು
ಬಿಳಿಯ ಹಾಳೆಯಲಿ ಪದಪದ್ಯ ಮಾಲೆ
ಅಚ್ಚರಿಯ ಮಾರ್ದನಿಯು ಓದುಗನೆದೆಯಲ್ಲಿ ಅಯ್ಯಾ
ಜಗದ ಹಾಳೆಯಲಿ ನಾನಿನ್ನ ಕೃತಿಯು
ವಿಸ್ಮಯವೀ ಜಗಕೆ ಪ್ರತಿಕೃತಿಯ ಕಂಡು
ಮೂಲವಿನ್ನೆಷ್ಟು ಸೊಗಸೊ ಬಣ್ಣಿಸಲು
ನಾ ಲೇಖನಿ ನೀ ಪದಸಂಪದ ಶ್ರೀರಘುವೀರೇಶ್ವರ. (೮೦)

ಮುತ್ತಚಿತ್ರಿಪ ಚಿತ್ರಕಾರಗೆ ಮೂರುತಾಸಿನ
ತಪವು, ಸಿಂಪಿಯೊಳಗಿನ ಮುತ್ತು
ಒಂದು ಜನ್ಮದ ಜಪವು, ಅಮ್ಮನಕ್ಕರದ
ಮುತ್ತು ಜನ್ಮಾಂತರದ ಸುಧೆಯು
ನಲ್ಲೆಯಧರದ ಮುತ್ತು ಏಳುಜನ್ಮದ ಮತ್ತು
ಜಗದ ಚಿಪ್ಪೊಳಗೆ
ನಾ ನಿನ್ನ ಮುತ್ತು ಶ್ರೀರಘುವೀರೇಶ್ವರ. (೮೧)

ಕತ್ತಲಲಿ ಕಣಜದ ಕಾಳು
ಬಿತ್ತದೆ ಉಳಿದ ಗೋಳು
ಅರೆವರೊ ಹುರಿವರೊ ಮಾರುವರೊ ಅಯ್ಯಾ
ಬೆಳಕ ಚುಂಬಿಸದೆ ಹನಿಯ
ಗುಟುಕಿಸದೆ ಫಲವ ಧರಿಸದೆ ಸಫಲತೆಯಿಲ್ಲ
ಬೇಳೆಯಾಗಿಸದೆ ಕಾಳಾಗಿಸೊ ಎನ್ನ
ಬಿತ್ತೆನ್ನ ನಿನ್ನ ಬಿತ್ತವಾಗಿ ಶ್ರೀರಘುವೀರೇಶ್ವರ. (೮೨)

ದಿರಿಸು ಪೇಟಗಳೇನು ಚೆನ್ನ
ನಾಚಿಕೆ ಸಂಕೋಚ ಲಜ್ಜೆಯಿರದಿರೆ
ಮಾನಿಸಗೆ ಮಾನ ಸಮ್ಮಾನವಿದೇ ಅಯ್ಯಾ
ಜರತಾರಿ ಹೊದ್ದು ಮನದೊಳಗೇ
ಜಾರುವುದೇನು ಚೆನ್ನ? ಅಕ್ಕ
ಬಿಚ್ಚೆಸದ ಬಟ್ಟೆ ತೋರುವುದೀ ಬಟ್ಟೆ
ನಿನಗೊಪ್ಪುವ ಅಲಂಕಾರವಾಗಿಸೆನ್ನ ಶ್ರೀರಘುವೀರೇಶ್ವರ. (೮೩)

ಕಡೆಗೋಲು ಬಲ್ಲುದೆ ಸವಿಯ?
ಕಡೆದ ಮಜ್ಜಿಗೆಯ, ಮಿದು ಬೆಣ್ಣೆಯ
ಉಣ್ಣುವುದು ಜಠರ, ಜಿಡ್ಡಷ್ಟೇ ಭಾಗ್ಯ ಅಯ್ಯಾ
ಬಿಸಿನೀರ ಶುದ್ಧಿಯ ಬಳಿಕದೇ ಜೀಕು
ಜನ್ಮ ಮರುಜನ್ಮ ಕಡೆದಷ್ಟು ದೇಹ
ಉಂಡಷ್ಟೂ ಮುಗಿಯದ ಕರ್ಮದಾಹ
ಕರಮುಗಿವೆ ಕಡೆಗಣಿಸದಿರೆನ್ನ ಶ್ರೀರಘುವೀರೇಶ್ವರ. (೮೪)

ಕೈ ಕಪ್ಪ ಕೊರಳ ಸರ
ಕಿವಿಯ ಬೆಂಡೋಲೆ ಶೂನ್ಯದುಂಗುರ
ಗೆಜ್ಜೆ ಬಣ್ಣದ ಲೋಹದ ಲೋಲಕ ಅಯ್ಯಾ
ಇಳೆ ಆಕಾಶ ನಕ್ಷತ್ರ ಗ್ರಹ
ಪಶು ಪಕ್ಷಿ ಮನುಜ ದೇವತೆಗಳು
ಒಂದೇ ಅಂತಃಸತ್ವದ ಅನಂತರೂಪಗಳು
ನಾನು-ನೀನಿಬ್ಬರಲ್ಲ ಒಬ್ಬನೇ ಶ್ರೀರಘುವೀರೇಶ್ವರ. (೮೫)

ಅಳುವೇನು ನಗುವೇನು
ಕರಡಿಯಪ್ಪುಗೆ ಬದುಕು
ಸುಡುತಡಿಯ ದಾಟದಲೆ ತಂಗಡಲೆ ಅಯ್ಯಾ
ಕಾಯ ದಂಡಿಸದೆ ಇಂದ್ರಿಯಂಗಳ
ದಮನಿಸದೆ ಸಹಸ್ರಾರ ಸುಖವಪ್ಪುದೆ?
ಭಕ್ತರ ಪರಿಕಿಸದೆ ಕಾಡದೆ
ಕಾಯಿಸದೆ ಒಲಿಯನಯ್ಯ ಶ್ರೀರಘುವೀರೇಶ್ವರ. (೮೬)

ದ್ರೌಪದಿಯ ಸೀರೆಯನು ಸೆಳೆವಾಗ
ಪಾಂಡವರೈವರೂ ಬೆತ್ತಲಾದರು ಅಯ್ಯಾ
ಇಂದ್ರಿಯಂಗಳ ಮರಣಿಸಲು
ಅಭಿಮಾನದಾವರಣ ಕಳೆಯಬೇಕಯ್ಯ
ಹರಿ ನೀನೇ ಗತಿಯೆಂದು ಕೈಯೆತ್ತಿ
ನಿಲ್ಲದಿರೆ ಕಾವನಯ್ಯ ಗಂಡರಗಂಡ
ಬೆತ್ತಲಾಗಿಸೆನ್ನ ಚಿತ್ತಚೋರ ಶ್ರೀರಘುವೀರೇಶ್ವರ. (೮೭)

ಮಂಜು ಮುಸುಕಿದ ಬೆಟ್ಟ
ರಾಮನ ಬೆನ್ನಹಿಂದಣ ಸೀತೆ
ಮರೆಸುವುದು ದಿಟರೂಪವನು ಅಯ್ಯಾ
ಹರಿಯಲೀ ಬೆಳಕು ಸರಿಯಲೀ
ಸೀತೆ ದೊರೆಯಲೀ ದರ್ಶನ
ಸೃಷ್ಟಿರಚನವಿಲಾಸವೊಡೆಯುವುದು
ಜ್ಞಾನಪ್ರಸಾದದಿಂದ ಕರುಣಿಸದನ ಶ್ರೀರಘುವೀರೇಶ್ವರ. (೮೮)

ಸೀತೆ ಕಳೆದಿಹಳೆಂಬ ಹುಯಿಲಿಗೆ
ದನಿಯಿಟ್ಟ ಲಕ್ಷ್ಮಣ ದಡ್ಡ ಖಂಡಿತ ಅಯ್ಯಾ
ರಾಮರೂಪಕೆ ತೆರೆಯಾದ ಸೀತೆ
ಸರಿದಿಹಳೆಂಬ ಸಂತಸ ಮರೆತಿಹನು
ರಾಮನನುದಿನದ ಸಾಂಗತ್ಯ ದೊರೆತುದಕೆ
ಹರ್ಷಿಸದೆ ಹಲುಬಿದನು ಹರಿಯಂತೆ
ಸರಿಸಿಬಿಡು ಸೀತೆಯರನು ಶ್ರೀರಘುವೀರೇಶ್ವರ. (೮೯)

ಇಷ್ಟದೈವವದು ಕಷ್ಟದೊಳಿರೆ
ಕಣ್ಣೀರ ತಡೆವುದೆಂತು ಅಯ್ಯಾ?
ಸತಿವಿರಹದೊಳಿರೆ ಸಂತಸಪಡಲಹುದೆ ಅನುಜ
ಶಿವನ ಕಣ್ಣರುಧಿರ ಕಲಕದೆ ಕಣ್ಣಪ್ಪನನು?
ಭಕ್ತ-ದೈವ ಭೇದವಳಿದ ಭಾವವದೆ ಮುಕ್ತಿ
ಕವಿ-ಕೃತಿ ಭುವಿ-ದಿವಿ ನೋಟದಲೆಕಾಣ್ಕೆ
ಜೀವದಲಿ ಭಾವ ಬೆರೆತಂತೆ ಬೆರೆಯೆನ್ನ ಶ್ರೀರಘುವೀರೇಶ್ವರ. (೯೦)

ಬದುಕು ವನವಾಸ ವಿಧಿಯಿಟ್ಟ
ದ್ಯೂತದಲಿ ನಿತ್ಯಸೋಲುಗಳು ಅಯ್ಯಾ
ಮತ್ತೆ ಮೇಲಜ್ಞಾತವಾಸ
ಅವರಿವರು ಗುರುತಿಟ್ಟ ಬಳಿಕ
ಮತ್ತದೇ ಜನನ ಮರಣದ ಚಕ್ರ
ಗುರುತು ಸಿಗದಂತೆ ಕಾಪಿಟ್ಟು
ಧರ್ಮಕ್ಷೇತ್ರವಾಗಿಸೆನ್ನ ಜೀವನವ ಶ್ರೀರಘುವೀರೇಶ್ವರ. (೯೧)

ಹೊತ್ತು ಹೆಪ್ಪೊಡೆವ ಸಮಯದಲಿ
ಕೋಳಿಕೂಗುವುದಂತೆ ಬೆಳಕುಹರಿಯುವುದಂತೆ
ಯಾವ ಮಾಟದ ಹುಂಜದ ಕರೆಗೊ
ಯಾವ ಬೆದೆಯ ಕರೆಮಾರ್ಕರೆಗೊ
ಕೂಗುವ ದನಿಗೆ ಕಿವಿಗೊಡುವನೆ ಅಯ್ಯಾ
ನನ್ನೆಲ್ಲ ಪ್ರಾರ್ಥನೆ ಕೋಳಿಕೂಗಂತೆ
ನಿನ್ನ ಕೃಪೆ ಕೂಗ ಫಲಿತವಲ್ಲ ಶ್ರೀರಘುವೀರೇಶ್ವರ. (೯೨)

ಕುರುಳು ಹೆಣಿಕೆಯ ಸೋಜಿಗವು
ನಾನು-ನೀನು-ಅವನೆಂಬ ಮುಕ್ಕಾಲು
ಬಿಚ್ಚಿಡಲು ಬ್ರಹ್ಮಾಂಡ ಹೆಣೆದಿರಲು ಬದುಕು ಅಯ್ಯಾ
ಹೆಣಿಗೆಯಲಿ ಕುರುಳನ್ನು ಕುರುಳಿನಲಿ
ಜಡೆಯನು ಕಾಣುವನು ದಿಟಯೋಗಿ
ಗುಟ್ಟ ಕಟ್ಟಿಡುವ ತುದಿಯದು ಒಲುಮೆಬಂಧ
ನೀ ನನ್ನ ಕುರುಳು ನಾ ನಿನ್ನ ಹೆಣಿಗೆ ಶ್ರೀರಘುವೀರೇಶ್ವರ. (೯೩)

ಚೌಕಕ್ಕೆ ಮೂಲೆ ನಾಲ್ಕು
ಬದುಕಿಗೂ ಅಂತೆಯೇ ಅಯ್ಯಾ
ನಾನು-ನೀನು-ಅವನು-ಅದು
ಅರ್ಥಮೊತ್ತವೆಲ್ಲ ನಾಲ್ಕರ ವಿಸ್ತೀರ್ಣ
ಐದನು ಕಂಡವನು ಕವಿ, ವಿಜ್ಞಾನಿ
ಆರನರಸಿಹನು ಯೋಗಿ ಪರಮಜ್ಞಾನಿ
ನಾ ಚೌಕ ನೀ ಮೂಲೆ ಶ್ರೀರಘುವೀರೇಶ್ವರ. (೯೪)

ಗಡಿಯಾರದೊಳಗೆಷ್ಟು ಕೀಲುಗಳು
ಚಕ್ರಗಳು ಹಲ್ಲುಗಳು ಮಸೆಯುತ್ತ
ತಿರುಗುತಿವೆ ಕಾಲಸೂಚಕಗಳಾಗಿ ಅಯ್ಯಾ
ಬ್ರಹ್ಮಾಂಡ ಪಿಂಡಾಂಡಗಳಂತೆಯೇ
ಆಡುತ್ತಿವೆ ಓಡುತ್ತಿವೆ ಬೆಂಬತ್ತಿ
ಗೊತ್ತು ಗುರಿಯಿದೆಯೆ ಚಲನೆಗೆ?
ಆವುದನೊ ಹಿಡಿಯಲೊ ತನ್ನ
ತಾ ಹಿಡಿದಿಡಲೊ; ಆವುದಂತಿರಲಿ
ನನ್ನೋಟ ನಿನ್ನತ್ತ ಶ್ರೀರಘುವೀರೇಶ್ವರ. (೯೫)

ವಿಷವೊ ವಿಷಯೆಯೊ ಇತಿಹಾಸ
ಸಾಕ್ರೆಟಿಸನೊ ಚಂದ್ರಹಾಸನೊ
ಹಿಡಿದ ಬಟ್ಟಲದು ನಡುಗದಿರದು ಅಯ್ಯಾ
ಬಂದುದೆಲ್ಲವ ಹಸಾದವೆಂದುಣುವ
ಮನದ ನಿಲುಮೆಯೆ ಗೆಲುವು
ಒಳಿತುವೊಡೆಯಲು ಮಥನ
ವಿಷಕಂಠನನ್ನಾಗಿಸೆನ್ನ ಶ್ರೀರಘುವೀರೇಶ್ವರ. (೯೭)

ಹೆಗಲ ಚೀಲದಲಿ ಬುತ್ತಿ
ತೊಗಲ ಚೀಲದಿ ಬುದ್ಧಿ ಅಯ್ಯಾ
ಗುರಿ ದೂರ ದುರ್ಗಮ
ಹಗಲು ಹಾರುವ ಮುನ್ನ
ತೊಗಲು ಜಾರುವ ಮುನ್ನ
ಕಾಂತಿ ದರುಶನಕೆ ಅಣಿಯಾಗಿಸೆನ್ನ
ನಾ ದೀಪ ನೀ ಕಾಂತಿ ಶ್ರೀರಘುವೀರೇಶ್ವರ. (೯೮)

ಜಟ್ಟಿಯ ಗುಟ್ಟು ರಟ್ಟಾಗುವುದು ಮಟ್ಟಿಯಲಿ
ಮೀಸೆ ಮಣ್ಣಾಗುವುದು ಉತ್ತರಕುಮಾರಗೆ
ಶಾಸ್ತ್ರ ಶಸ್ತ್ರಗಳೆಲ್ಲ ಪ್ರಯೋಗದಿಂದಲೇ
ಸಿದ್ಧವು ಬರಿಯ ಗಳಹಿಕೆಯಿಂದಲ್ಲ ಅಯ್ಯಾ
ಭಕ್ತಿ ಸಿದ್ಢ ಭಾವಸಮಾಧಿಯಲಿ
ಜ್ಞಾನ ಸಿದ್ಧ ನಿರ್ವಿಕಲ್ಪಸಮಾಧಿಯಲಿ
ನಾ ಸಿದ್ಧ ನಿನ್ನೈಕ್ಯದೊಳು ಶ್ರೀರಘುವೀರೇಶ್ವರ. (೯೯)

ಕನ್ನೆಯನು ಕೂಡಿಟ್ಟು ಪಾವಿತ್ರ್ಯವ
ಕಾಪಿಡಬಹುದೆ? ರಾಮರಕ್ಷಣೆಯಲಿ
ಸೀತಾಪಹರಣವೆಂತಾಯ್ತು ಅಯ್ಯಾ?
ಸೀತೆಯನು ಸಲಹಿದ್ದು ಧನುವಲ್ಲ
ಅವಳದೇ ಸಾತ್ವಿಕ ಮನವು
ಪುರುಷಾಹಂಕಾರ ಪಾವಿತ್ರ್ಯವದು
ಸ್ತ್ರೀ ಸಾತ್ವಿಕತೆಯ ಭಿಕ್ಷೆ
ಉಮೆಯ ಕರುಣೆಯಿರಲೆಮಗೆ ಶ್ರೀರಘುವೀರೇಶ್ವರ. (೧೦೦)

ಮದ್ದಲೆಗೆ ಮಿತಿಯುಂಟೆ
ಬಡಿದಂತೆ ನುಡಿವುದು ಅಯ್ಯಾ
ಮಾರುತಕೆ ದಿಕ್ಕುಂಟೆ
ಸೆಳೆದತ್ತ ಸುಳಿವುದು
ಭಕ್ತರಲಿ ಭೇದವುಂಟೆ
ಬೆರೆತಲ್ಲಿ ಭಕ್ತಿಯಿಹುದು
ಎಡೆಯಿಡದೆ ಬೆರೆಯೆನ್ನ ಶ್ರೀರಘುವೀರೇಶ್ವರ. (೧೦೧)

ದಿಕ್ಕುತಪ್ಪಿದ ನಾವಿಕ ಕುಡಿಯಲಹುದೆ
ಸಾಗರದ ಜಲವ?
ಭವಸಮುದ್ರದೊಳಿದ್ದು ಆನಂದಿಸಬಹುದೆ
ಇಂದ್ರಿಯಂಗಳ?
ಲವಣಕಾರಣ ಜಲದ ಮಲಿನತೆಗೆ ಅಯ್ಯಾ
ಬುದ್ಧಿಕಾರಣ ಇಂದ್ರಿಯಂಗಳ ಸೆಳವಿಗೆ
ಕುದಿಸಿ, ಶೋಧಿಸಿ ಶೇಖರಿಪ ಜಲದಂತೆ
ಶೋಧಿಸೆನ್ನ ಇಂದ್ರಿಯಂಗಳ ಶ್ರೀರಘುವೀರೇಶ್ವರ. (೧೦೨)

ಪಾಂಡವರೈವರೂ ಸೋತರಯ್ಯಾ ಸಕಲವನು
ಪಾಂಚಾಲಿ ಕೊಡಿಸಿದಳಯ್ಯಾ ಕಳೆದ ಅಸ್ತ್ರಗಳ
ಪಂಚೇಂದ್ರಿಯಗಳು ಸೋಲ್ವುವಯ್ಯಾ ಜಗದೊಳಗೆ
ಬುದ್ಧಿ ದ್ರೌಪದಿಯದು ದೊರಕಿಸಿದರೆ ಅಂತಃಸತ್ವವನು
ಅವೇ ಇಂದ್ರಿಯಂಗಳ ಬಳಸಿ ಗೆಲಬಹುದಯ್ಯಾ
ಜೀವನವು ರಣಕ್ಷೇತ್ರ ಬುದ್ಧಿ ದ್ರೌಪದಿಯಾಗಿಸಿ
ಗೆಲಿಸೆನ್ನನವರತ ಶ್ರೀರಘುವೀರೇಶ್ವರ. (೧೦೩)

ಕಣಕಿಳಿಯದೆ ರಕ್ತದೋಕುಳಿಯಾಡಬಹುದು
ಶಕುನಿ-ದ್ರೌಪದಿಯರು ಚಿರಾಯುಗಳು ಅಯ್ಯಾ
ಗರದಿಂದ ಗೆಲ್ಲಿಸಿ ಊರುಭಂಗವ ಮಾಡಿಸಿದ ಮಾವ
ಸಿರಿಮುಡಿಗೆ ಮೈದುನನ ರಕ್ತಲೇಪಿಸಿದಳು ಸೈರಂಧ್ರಿ
ಕರ್ಣಾಜುನರೆಲ್ಲ ಪಗಡೆಕಾಯಿಗಳಯ್ಯಾ
ಭೀಷ್ಮದ್ರೋಣರೆಲ್ಲ ಗರಬಡಿದಿಹರು
ನಿನ್ನ ಕಾಲಾಳಾಗಿಸಿ ಕಾಪಿಡೆನ್ನ ಶ್ರೀರಘುವೀರೇಶ್ವರ. (೧೦೪)

ಬಲೆಗೆ ಸಿಲುಕಿದ ಮಿಗವು
ಪ್ರಾಣಭಿಕ್ಷೆಯ ಬೇಡುವೊಡೆ
ಬಿಟ್ಟುಬಿಡುವನೆ ಬೇಟೆಗಾರ ಅಯ್ಯಾ?
ವಿಷಯ ಬಲೆಯೊಳಗೆ ಬಂಧಿ
ಕಾಯಕರಣಂಗಳು ಕೈಮುಗಿದೊಡೇನು?
ಕಟುಕನಿಗಿಲ್ಲ ಕರುಣೆಯ ಕಣ್ಣು
ಕಾಲಕಂಟಕ ಕಾಪಾಡೆನ್ನ ಶ್ರೀರಘುವೀರೇಶ್ವರ. (೧೦೩)

ಮರಳ ಕಣದೊಳಗೆ ಹರಿವ ನದಿಯಿಹುದು
ಮಗನ ವಿಜಯದ ಕೇಕೆಯಲಿ ತಾಯ
ಪ್ರಸವ ವೇದನೆಯ ನೋವಿಹುದು ಅಯ್ಯಾ
ಬದುಕಿನಬ್ಬರದಲಿ ಶವಯಾತ್ರೆ ಸಂಗೀತ
ಮೊದಲರಾತ್ರಿಯಲೇ ಏಕಾಂತಗಳಂತ್ಯ
ಸೂರ್ಯ ಮರಣದಲೇ ಚಂದ್ರೋದಯ
ನನ್ನಳಿವಿನಲೇ ನಿನ್ನ ಬೆಡಗು ಶ್ರೀರಘುವೀರೇಶ್ವರ. (೧೦೪)

ಮನುಜ ಮುಕ್ತನಾಗುವುದು ಸರಳವೆ?
ಸ್ವಾತಿ ಹನಿ ಮುತ್ತಾಗುವುದು ಸುಲಭವೆ, ಅಯ್ಯಾ?
ತೊಟ್ಟ ಕಳೆದು ಹಣ್ಣಾದುದೆಂತು?
ಹೂವಾಗಿ, ಹೀಚಾಗಿ, ಕಾಯಾಗಿ
ಕೀಟ, ಮಂಗ ಮಾನವರಿಂ ಪಾರಾಗಿ
ಮಾಗಿ ನೈವೇದ್ಯಕಣಿಯಾಯಿತಯ್ಯಾ
ಎಲೆಮರೆಯ ಹಣ್ಣಾಗಿಸೆನ್ನ ಶ್ರೀರಘುವೀರೇಶ್ವರ. (೧೦೫)

ಎನಿತು ದೇಹಗಳೊ ಅನಿತು ದಿರಿಸುಗಳು
ಎನಿತು ಭಾವಗಳೊ ಅನಿತು ಭಾಷೆಗಳು ಅಯ್ಯಾ
ನೀನುಟ್ಟ ಬಟ್ಟೆಯಮಗೆ ವಿಚಿತ್ರ
ನೀ ಹಿಡಿದ ಬಟ್ಟೆಯದು ಮತ್ತೂ ವಿಚಿತ್ರ
ಅಲ್ಲಮನೊ ಅಕ್ಕನೊ ಅಣ್ಣನೊ
ಬೆಲ್ಲವೊ ಸಕ್ಕರೆಯೊ ರುಚಿಗೆ ಹದನು
ನಿನ್ನಡಿಯ ಮಕರಂದ ಸಾಕೆನಗೆ ಶ್ರೀರಘುವೀರೇಶ್ವರ. (೧೦೬)

ತಿರೆಯ ತಿಗರಿಯಲಿ ಎನಿತು
ಮಡಕೆ ಕುಡಿಕೆಗಳೊ ಅಯ್ಯಾ
ಅನುಭವದ ಆವುಗೆಯ ಹದನ
ಪರಿಕಿಪುದು ಸುಲಭ ನಿನಗೆ
ತಿರು ತಿರುಗಿ ಮತ್ತೊಣಗಿ ಕಿಚ್ಚ
ಹಾಯುವ ಕಡುಕಷ್ಟ ಎಮಗೆ
ಕುಂಬಾರ ಬಿಡಿಸೆನ್ನ ತಿಗರಿಯಿಂ ಶ್ರೀರಘುವೀರೇಶ್ವರ. (೧೦೭)