Tuesday, 30 June 2015

ನಿರಹಂಕಾರವೆಂಬ ರಾಮಬಾಣ

ಸಂಪಾದಕೀಯ, ವಿವೇಕಹಂಸ, ಜುಲೈ ೨೦೧೫

ನಿರಹಂಕಾರವೆಂಬ ರಾಮಬಾಣ

ಆಶ್ರಮದ ಬಾಲಕರೆಲ್ಲ ದೊಡ್ಡ ಹಾಲ್‌ನಲ್ಲಿ ಮಲಗುತ್ತಿದ್ದರು. ಅದರ ಪಕ್ಕದ ಕೊಠಡಿಯಲ್ಲಿ ಬಾಗಿಲಿನ ಹತ್ತಿರವೆ ಯಜಮಾನರು ಮಲಗುತ್ತಿದ್ದರು. ಬಾಲಕರು ರಾತ್ರಿವೇಳೆ ಮೂತ್ರ ವಿಸರ್ಜನೆಗೆ ಹೋಗಬೇಕಾದರೆ ತಾತಎಂದು ಕರೆಯುತ್ತಿದ್ದರು. ಯಜಮಾನರು ಕೂಡಲೆ ಎಚ್ಚರಗೊಂಡು ಬಂದಎನ್ನುತ್ತಿದ್ದರು, ‘ಬಂದೆಎನ್ನುತ್ತಿರಲಿಲ್ಲ. ಯಾರಾದರೂ ತಮ್ಮನ್ನು ಕಾಣಲು ಬಂದಿರುವ ವಿಷಯ ತಿಳಿದಾಗಲೂ ಬಂದ'' ಅಂತ ಹೇಳು ಎನ್ನುತ್ತಿದ್ದರೇ ಹೊರತು ಬಂದೆ'' ಅಂತ ಹೇಳು ಎನ್ನುತ್ತಿರಲಿಲ್ಲ. ಬಂದೆಎಂದರೆ ನಾನು ಬಂದೆಎಂದಾಗುತ್ತದೆ. ಅಹಂಕಾರ ಪ್ರವೇಶ ಮಾಡುತ್ತದೆ ಎಂದವರ ಭಾವನೆ.’ (ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರು, ಪ್ರೊ|| ವಿ. ಕೃಷ್ಣಶೆಟ್ಟಿ, ಪು. ೭೧). ಇದು ಹಿರಿಯ ಜೀವನವೊಂದರ ಒಂದು ಪಲುಕು. ಅಂದಿನ ಕಾಲಕ್ಕೆ ಇಡೀ ನಗರವೇ ನಿಬ್ಬೆರಗಾಗುವಷ್ಟು ಶ್ರೀಮಂತಿಕೆಯನ್ನು ಹೊಂದಿದ್ದ ದೊಡ್ಡಣ್ಣ ಶೆಟ್ಟರು ಬಡ ಮಕ್ಕಳಿಗೆಂದು ತಾವು ಸ್ಥಾಪಿಸಿದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಆಶ್ರಮದ ವಾರ್ಡನ್ ಆಗಿ ತಾವೇ ನಿಂತು ಅವರನ್ನು ಪೋಷಿಸಿದ ಪ್ರೀತಿಯ ರೀತಿಯಿದು. ಬೆಂಗಳೂರೆಂಬ ಸಾಂಸ್ಕೃತಿಕ ನಗರಕ್ಕೆ ಮಾನವೀಯ ಹೃದಯವನ್ನು ಅಳವಡಿಸುವುದಕ್ಕೆ ತಮ್ಮ ಬದುಕನ್ನೇ ಮುಡುಪಿರಿಸಿದ ಮಹನೀಯರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವರು ದೊಡ್ಡಣ್ಣ ಶೆಟ್ಟರು. ಅವರ ಬಗ್ಗೆ ಬರೆಯಹೊರಟರೆ ಅದೇ ಒಂದು ಸಂಪುಟವಾಗುತ್ತದೆ. ಇಲ್ಲಿ ಈ ಪ್ರಸಂಗವನ್ನು ಉಲ್ಲೇಖಿಸಿದ ಕಾರಣವಿಷ್ಟೆ. ಅಹಂಕಾರವನ್ನು ಒಂದು ಎಳ್ಳಿನ ಮೊನೆಯಷ್ಟನ್ನೂ ಉಳಿಸಿಕೊಳ್ಳದ ಈ ಮಹನೀಯರ ಜೀವನದರ್ಶನ ಎಷ್ಟು ಮಹತ್ತರವಾದದ್ದು ಎಂದು ತಿಳಿಸುವುದು.

ಅಹಂಕಾರವೆಂಬುದು ಸೂಕ್ಷ್ಮರೂಪದಲ್ಲಿ ಪ್ರವೇಶಿಸಿ ಯಾವ ಯಾವ ರೂಪದಲ್ಲಿ ಬದುಕನ್ನು ಆವರಿಸಿಕೊಳ್ಳುತ್ತದೆ ಎಂಬುದನ್ನು ಊಹಿಸಿಕೊಳ್ಳಲಸಾಧ್ಯ. ಪುರಾಣದಲ್ಲಾಗಲೀ ಚರಿತ್ರೆಯಲ್ಲಾಗಲೀ ಪತನಹೊಂದಿದವರನ್ನೊಮ್ಮೆ ಪರಾಂಬರಿಸಿದಾಗ ಅರಿವಾಗುವುದು ಅವರ ಪತನಕ್ಕೆ ಕಾರಣ ಅವರ ಅಹಂಕಾರ. ಹಾಗೆಯೇ ಮಹಾತ್ಮರ ಬದುಕನ್ನು ವೀಕ್ಷಿಸಿದಾಗ ತಿಳಿಯುವುದು ಅವರು ಎತ್ತರಕ್ಕೇರಲು ಮೆಟ್ಟಿ ನಿಂತಿದ್ದು ತಮ್ಮ ಅಹಂಕಾರವನ್ನೇ ಎಂದು. ಶ್ರೀರಾಮಕೃಷ್ಣರನ್ನು ಎಲ್ಲರೂ ಅವತಾರಪುರುಷರೆಂದು ಆರಾಧಿಸಿದಾಗಲೂ ಅವರು ಹೇಳುತ್ತಿದ್ದುದು ಎಲ್ಲ ಭವತಾರಿಣಿಯ ಇಚ್ಛೆ ಎಂದು. ಹಾಗೆಯೇ ವಿವೇಕಾನಂದರು ತಮ್ಮ ಅಭಿಮಾನಿಗಳಿಗೆ ಹೇಳಿದ್ದು, “ ನನ್ನನ್ನು ಇಲ್ಲಿಟ್ಟಿರುವುದು ಗುರು ಪರಮಹಂಸರ ಕರುಣೆ. ಅವರು ಇಚ್ಛಿಸಿದರೆ ಅವರ ರೋಮರೋಮಗಳಿಂದ ನೂರಾರು ವಿವೇಕಾನಂದರು ನಿರ್ಮಾಣಗೊಳ್ಳಬಲ್ಲರು. ಈ ಬಗೆಯ ಶ್ರದ್ಧೆಯುಳ್ಳವರು ಮಾತ್ರವೇ ಅಹಂಕಾರವನ್ನು ಇಲ್ಲವಾಗಿಸಿಕೊಂಡವರು ಮಾತ್ರವೇ ಮಹತ್ತರವಾದದ್ದನ್ನು ಸಾಧಿಸಲು ಸಾಧ್ಯ. ವಾಲಿಗೆಂತಹ ಅಹಂಕಾರ! ರಾವಣನನ್ನೇ ಕಂಕುಳಿನಲ್ಲಿರಿಸಿಕೊಂಡು ಸಪ್ತಸಮುದ್ರಗಳಲ್ಲಿ ಅದ್ದಿತೆಗೆದೆ, ಇಂದ್ರಮಾಲೆಯನ್ನೇ ಕೊರಳಲ್ಲಿ ಧರಿಸಿದೆ, ದುಂದುಭಿಯನ್ನು ಕೊಂದೆ, ಹೀಗೆ. ರಾವಣನಿಗೆ ಶಿವನಿಂದಲೇ ಆತ್ಮಲಿಂಗ ಪಡೆದ ಅಹಂಕಾರ, ಕುಬೇರನನ್ನು ಕಾಡಿಸಿದ ಅಹಂಕಾರ. ಆದರೆ ಇವರಿಬ್ಬರನ್ನೂ ದಂಡಿಸಿದ್ದು ಶ್ರೀರಾಮ. ಪಟ್ಟಾಭಿಷೇಕದಿಂದ, ಸಿಂಹಾಸನಾರೋಹಣದಿಂದ ಒಂದರೆಕ್ಷಣದಲ್ಲಿ ವಂಚಿತನಾದರೂ ವಿಹ್ವಲಗೊಳ್ಳದೆ ಯಾರನ್ನೂ ಶಪಿಸದೆ ಅತ್ಯಂತ ಸರಳ ಉಡುಗೆ ತೊಟ್ಟು ಕಾಡಿಗೆ ನಡೆದ ನಿರಹಂಕಾರಿ ರಾಮ. ಹೀಗಾಗಿಯೇ ರಾವಣನ ಮಾಯಾಸ್ತ್ರಗಳಿಗಿಂತ ರಾಮನ ನಿರಹಂಕಾರದ ರಾಮಬಾಣವೇ ಹೆಚ್ಚು ಪರಿಣಾಮಕಾರಿ. ಜಗವೆಂಬ ಅಹಂಕಾರ ವಿಲಾಸದಲ್ಲಿ, ಅಹಂಕಾರ ವಿಹಾರದಲ್ಲಿ ನಾನೆಂಬ ಅಹಂ ಹೂವಾಗಿ ಅರಳುವುದೋ ಹಾವಾಗಿ ಕಾಡುವುದೋ ಎಂಬುದನ್ನು ಗಮನಿಸುತ್ತಲೇ ಇರಬೇಕು. ಹಾಗೆಂದ ಮಾತ್ರಕ್ಕೆ ನೆನೆದ ಅವಲಕ್ಕಿಯಂತೆ ಮೆದುವಾಗಿ ಎಲ್ಲರಿಂದ ಘಾತಕ್ಕೊಳಪಡಬೇಕು ಎಂದಲ್ಲ. ಸೀತೆಯನ್ನು ಹಿಂದಿರುಗಿ ಪಡೆಯಲು ಶ್ರೀರಾಮ ಪ್ರಯತ್ನಮಾಡಿದ್ದರಿಂದಲ್ಲವೇ ಅವನ ಕೋದಂಡಕ್ಕೆ ಗೌರವ ಮೂಡಿದ್ದು. ಅಭಿಮಾನಕ್ಕೆರವಾಗದಂತೆ ಅಹಂಕಾರವನ್ನು ಮೊಟಕಿಸುತ್ತಾ ಮುಂದೆ ಸಾಗಬೇಕು. ಇದೇ ಜೀವನದ ಸಾಫಲ್ಯತೆಯ ಗುಟ್ಟು.

Monday, 29 June 2015

ಶೇಕಡಾ ಎಷ್ಟು?

ಸಂಪಾದಕೀಯ, ವಿವೇಕಹಂಸ,  ಜೂನ್ ೨೦೧೨

ಶೇಕಡಾ ಎಷ್ಟು?

ಪರೀಕ್ಷೆಯ ಫಲಿತಾಂಶಗಳು ಹೊರಬಂದಿವೆ. ವರ್ಷಾಂತ್ಯದ ಓದಿನ ಸುಗ್ಗಿಯ ಕಣದಲ್ಲಿ ಜಳ್ಳು ತೂರಿ ಕಾಳು ಉಳಿಸಿಕೊಂಡೆವೆಂಬ ಭ್ರಮೆಯಲ್ಲಿ ನಾವಿದ್ದೇವೆ. ಮುಂದಿನ ನಡೆಯ ಬಗ್ಗೆ ಎಲ್ಲರ ಗಮನ. ಓದು ಜೀವನದ ಒಂದು ಭಾಗ, ಉಳಿದ ಭಾಗಗಳನ್ನು ತುಂಬಿಕೊಳ್ಳಲು ಇದು ನೆರವಾಗುತ್ತದೆಯೇ ಹೊರತು ಇದೇ ಎಲ್ಲವೂ ಅಲ್ಲ. ದುರದೃಷ್ಟವೆಂದರೆ ಇಂದಿನ ಜಗತ್ತಿನಲ್ಲಿ ವಿದ್ಯಾರ್ಥಿಗಳು ಓದಿನ ಮೂಟೆಯಾಗುತ್ತಿದ್ದಾರೆಯೇ ಹೊರತು ಉತ್ಸಾಹದ ಊಟೆಯಾಗುತ್ತಿಲ್ಲ. ಆಟ-ಊಟ-ಪಾಠದ ಬದಲಾಗಿ ಪಾಠ-(ಊಟದ ಜೊತೆಗೂ)ಪಾಠ-ಪಾಠದ ಪರಿಪಾಟಿ ಬೆಳಯುತ್ತಿದೆ. ಹದಿಹರೆಯದ ಮಕ್ಕಳು ತಮ್ಮ ಸಹಜ ವಿಕಾಸ ಪಡೆಯುವಲ್ಲಿ ತಡೆಯಾಗುತ್ತಿದೆ ಓದಿನ ಒತ್ತಡ. ಇದರಿಂದ ವ್ಯಕ್ತಿಯಾಗಲೀ ಸಮಾಜವಾಗಲೀ ಪಡೆಯುವ ಪ್ರಯೋಜನವೇನು? ನನ್ನ ವೈದ್ಯಮಿತ್ರರೊಬ್ಬರು ಕೋಳಿಫಾರಂನ ಕೋಳಿಗಳನ್ನು ಬೆಳೆಸುವ ಕ್ರೌರ್ಯವನ್ನು ಕುರಿತು ಹೇಳುತ್ತಾ, “ ಅವುಗಳ ದೇಹದ ತೂಕ ವೃದ್ಧಿಸಲು ಸ್ಟೆರಾಯ್ಡ್‌ಯುಕ್ತ ಆಹಾರವನ್ನು ನೀಡುತ್ತಾರೆ. ಪರಿಣಾಮವೇನಾಗುತ್ತದೆಂದರೆ ಅದರ ಕಾಲಿನ ವಯಸ್ಸು ಮೂರು ತಿಂಗಳಿನದಾದರೆ ಅದು ಹೊರುವುದು ಆರುತಿಂಗಳಿನ ತೂಕದ ದೇಹದ ಭಾರ!”. ನಮ್ಮ ಮಕ್ಕಳಿಗೂ ಇದನ್ನು ಅನ್ವಯಿಸಬಹುದೆ? ಎಲ್ಲರೂ ಉತ್ತಮ ಅಂಕ ಗಳಿಸುವ ಹಪಾಪಿಯಲ್ಲಿ ಬೆಳಗ್ಗೆ ಸಂಜೆ  ಮನೆಪಾಠ, ದಿನವಿಡೀ ಶಾಲೆಯ ಪಾಠ. ಅವರ ದೇಹ ಚಿಕ್ಕದಾದರೂ ನಾವು ಬಯಸುವುದು ಅದರೊಳಗೆ ವಿಶ್ವೇಶ್ವರಯ್ಯನವರ ಮಿದುಳನ್ನು!
ಓದು ಬೇಕು ನಿಜ. ಆದರೆ ಎಷ್ಟು ಎಂಬ ಆಯ್ಕೆ ಅವರವರ ಸಾಮರ್ಥ್ಯಕ್ಕೆ ಬಿಟ್ಟಿದ್ದು.

ಓದಿದವರೆಲ್ಲ ಸಮಾಜಕ್ಕೆ ಉಪಕಾರಿಗಳಾಗುತ್ತಾರೆ ಎಂಬ ಖಾತರಿಯಿಲ್ಲ. ಮಾಹಿತಿಸಂಗ್ರಹ ಮಾಡಿಕೊಂಡ ಮನುಷ್ಯ ಅದನ್ನು ಒಳಿತಿಗೂ ಬಳಸಬಹುದು, ಕೆಟ್ಟದಕ್ಕೂ ಬಳಸಬಹುದು. ಬುದ್ಧಿವಂತಿಕೆಯೊಂದಿಗೆ ಹೃದಯವಂತಿಕೆಯನ್ನು ಮೂಡಿಸದಿದ್ದರೆ ಅದನ್ನು ಶಿಕ್ಷಣವೆನ್ನಲಾಗದು. ಹಿಂದೆ ರಾಕ್ಷಸರಿದ್ದರಂತೆ. ತಪಸ್ಸು ಮಾಡಿ ಬೇಕಾದ್ದನ್ನು ಪಡೆಯುತ್ತಿದ್ದರು, ಸ್ವರ್ಗವನ್ನೂ ವಶಪಡಿಸಿಕೊಳ್ಳುತ್ತಿದ್ದರು, ಬಳಿಕ ಲೋಕಕಂಟಕರಾಗಿ ಕ್ರಮೇಣ ಅಧೋಗತಿಗೆ ಇಳಿದು ನಾಶವಾಗುತ್ತಿದ್ದರು. ತಪಸ್ಸಿನ ಪುಣ್ಯದ ಫಲವಾಗಿ ಪಡೆದುಕೊಂಡದ್ದನ್ನು ಪಾಪಾರ್ಜನೆ ಮಾಡಿ ಕಳೆದುಕೊಳ್ಳುತ್ತಿದ್ದರು. ಹೀಗೆ ಶಿಕ್ಷಣವನ್ನು ಸ್ವಂತಕ್ಕಾಗಿ ಸ್ವಾರ್ಥಕ್ಕಾಗಿ ಬಳಸಿಕೊಂಡವರು ಹಾಳಾಗುತ್ತಾರೆ. ಶಿಕ್ಷಣ ಬುದ್ಧಿಗಷ್ಟೇ ಅಲ್ಲ ಹೃದಯಕ್ಕೂ. ನಮ್ಮ ಮಗು ಎಷ್ಟು ಅಂಕ ಗಳಿಸಿದೆ ಎಂಬುದು ಮುಖ್ಯವಲ್ಲ, ಅದು ಈ ಜಗತ್ತಿನೊಂದಿಗೆ ಎಷ್ಟರಮಟ್ಟಿಗಿನ ಸಂಬಂಧವನ್ನು ಸ್ಥಾಪಿಸಿಕೊಂಡಿದೆ ಎಂಬುದು ಮುಖ್ಯ. ಮಗಳನ್ನು ರಜೆಯಲ್ಲಿ ಹಳ್ಳಿಗೆ ಕರೆದೊಯ್ದಿದ್ದೆ. ಎದುರಿನ ಕುರಿದೊಡ್ಡಿಯಲ್ಲಿ ಅದೇತಾನೆ ಕುರಿ ಮರಿ ಹಾಕಿತ್ತು. ಮರಿಯನ್ನು ಮುದ್ದಿಸಲು ಮಗಳು ಅಪೇಕ್ಷಿಸಿದಳು. ಮರಿಯನ್ನು ತರಿಸಿದೆ. ಐದಾರು ನಿಮಿಷದ ಬಳಿಕ ಹತ್ತಿರವಿದ್ದ ಹಳ್ಳಿಯ ಬಾಲಕ ಹೇಳಿದ, “ಸ್ವಾಮಿಕುರಿ ಬಡ್ಕತೈತೆ, ಮರಿ ಕೊಡಿ ತಾಯಿ ತಾವ ಬುಡ್ತೀನಿ”. ನಮ್ಮ ಕೃತಕ ಪ್ರೀತಿಯ ಪೂರದಲ್ಲಿ ನಮಗೆ ತಾಯಿಕುರಿಯ ಕರೆ ಕೇಳಿಸಿರಲೇ ಇಲ್ಲ! ಆ ಹುಡುಗ ನನ್ನಂತೆ ವಿದ್ಯಾವಂತನಲ್ಲ ಆದರೆ ಹೃದಯವಂತ.ಪ್ರಯೋಗಾಲಯದಲ್ಲಿ ನೂರಾರು ಕಪ್ಪೆಗಳನ್ನು ಕೊಯ್ದು ಅವುಗಳ ಅಧ್ಯಯನ ಮಾಡುವದಕ್ಕಿಂತ ಮಳೆಗಾಲದ ರಾತ್ರಿಯಲ್ಲಿ ಅವುಗಳ ಸಮೂಹ ಗಾಯನ ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ಮುದವಿದೆ. ಶೇಕಡವಾರು ಅಂಕಗಳಿಕೆಗಿಂತ ಅರಿವನ್ನು ವಿಸ್ತರಿಸಿಕೊಳ್ಳುವಲ್ಲಿ ಮಹತ್ತಿದೆ.

Sunday, 28 June 2015

ಕಲಿಕೆಯ ಬಂಡವಾಳ

ಕಲಿಕೆಯ ಬಂಡವಾಳ

ಸಂಪಾದಕೀಯವಿವೇಕಹಂಸ ಜೂನ್ ೨೦೧೫


ಇಂದು ಎಲ್ಲವನ್ನೂ ಹಣದ ಹಿನ್ನೆಲೆಯಲ್ಲಿ ವಿವರಿಸಬೇಕಾದಂತಹ ಪರಿಸ್ಥಿತಿ. ಅದರಲ್ಲಿಯೂ ಶಾಲಾ ಕಾಲೇಜುಗಳ ವಾರ್ಷಿಕ ಆರಂಭದ ಮಾಸವಿದು. ಕೊಡು-ಕೊಳ್ಳುವಿಕೆ, ದಲ್ಲಾಳಿ ಇವೆಲ್ಲ ಈ ಕ್ಷೇತ್ರವನ್ನೂ ಬಿಡದೆ ಆವರಿಸಿಕೊಂಡಿದೆ. ತಂದೆ ತಾಯಿಗಳೂ ತಮ್ಮ ಮಕ್ಕಳ ಓದಿಗೆ ನೀಡಿದ ಹಣವನ್ನು ಲೆಕ್ಕಹಾಕುವುದನ್ನು ನೋಡಿದ್ದೇನೆ. ಇದು ಸರಿಯೋ ತಪ್ಪೋ ಎನ್ನುವುದಕ್ಕಿಂತ ಯಾವಮಟ್ಟದಲ್ಲಿ ಇದನ್ನು ಪರಿಗಣಿಸಬೇಕು ಎಂಬುದು ಪ್ರಶ್ನೆ. ಕಡೇಪಕ್ಷ ಎರಡನೇ ಪಿಯುಸಿ ವರೆಗೆ ಶಿಕ್ಷಣಕ್ಕೆ ತೊಡಗಿಸುವ ಹಣ ಕೊಡುಗೆಯಾಗಬೇಕೇ ಹೊರತು ಬಂಡವಾಳವೆಂದು ಪರಿಗಣಿತವಾಗಬಾರದು. ಅಲ್ಲಿಂದಾಚೆಗೆ ಅಂದರೆ ಪದವಿಯ ಮಟ್ಟದ ವೇಳೆಗೆ ವಿದ್ಯಾರ್ಥಿ ತನ್ನೋದಿಗೆ ತಾನೇ ಹಣ ತೊಡಗಿಸುವಂತಾಗಬೇಕು. ಈ ಕೆಚ್ಚು ಪೇಟೆ ಹುಡುಗರಿಗಿಂತ ಹಳ್ಳಿ ಹುಡುಗರಲ್ಲಿ ಹೆಚ್ಚು. ಹಳ್ಳಿಯ ಮಿತ್ರ ಫೋನಿನಲ್ಲಿ ಹೇಳಿದ, “ ಚಿಕ್ಕ ಮಗ ಪಿಯುಸಿ ಪಾಸಾಗುವ ಭರವಸೆ ಹೊಂದಿದ್ದಾನೆ. ಅವನು ಈಗ ರಜೆಯಲ್ಲಿ ಬೆಂಗಳೂರಿಗೆ ಬಂದು ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ಗಳಿಕೆಯ ಹಣದಲ್ಲಿ ತನ್ನ ಪದವಿ ಕಾಲೇಜಿನ ಪ್ರವೇಶದ ಫೀ ತುಂಬುವ ಹಠ ತೊಟ್ಟಿದ್ದಾನೆ....ಫಲಿತಾಂಶದ ಹಿಂದಿನ ದಿನ ಊರಿಗೆ ಬರುತ್ತಾನೆ”. ನಗರದ ಎಷ್ಟು ಮಕ್ಕಳು ಈ ಬಗೆಯ ಸವಾಲು ಸ್ವೀಕರಿಸುತ್ತಾರೆ? ರಜೆಯಿರುವುದು ಮಜಾ ಮಾಡಲು ಎಂಬ ಮನೋಭಾವವೇ ಇವರಲ್ಲಿ ಹೆಚ್ಚು. ಇವರಲ್ಲೂ ಕೆಲವರು ದುಡಿದು ಓದುವವರಿದ್ದಾರೆ. ಆದರೆ ಈ ಪ್ರಮಾಣ ಹಳ್ಳಿಯ ಮಕ್ಕಳಲ್ಲಿ ಹೆಚ್ಚು. ಎಸ್‌ಎಸ್‌ಎಲ್‌ಸಿ ಫಲಿತಾಂಶ ನೋಡಿದೆವಲ್ಲ, ಅದರಲ್ಲಿ ಗ್ರಾಮೀಣ ಮಕ್ಕಳದೇ ಮೇಲುಗೈ. ಇದಕ್ಕೆ ಕಾರಣ ಅವರಲ್ಲಿ ತಾವು ಮೇಲೆದ್ದು ಬರಬೇಕೆಂಬ ಅಭೀಪ್ಸೆ, ಉದ್ಧಾರವಾಗಬೇಕೆಂಬ ಹಂಬಲ.ವಿದ್ಯಾರ್ಜನೆಯಲ್ಲಿ ತೊಡಗಿಸಬೇಕಾದ್ದು ಹಣವನ್ನಲ್ಲ, ಮನಸ್ಸನ್ನು. ಪದವಿ ಎನ್ನುವುದು ಒಂದು ಅರ್ಹತೆಯೇ ಹೊರತು ಅದು ಉದ್ಯೋಗ ಖಾತರಿಪತ್ರ ಅಲ್ಲ. ಆದುದರಿಂದ ಹಣ ಖರ್ಚು ಮಾಡಿ ಪದವಿ ಓದಿಸಿದರೂ ಮಗ/ಮಗಳು ನಿಷ್ಪ್ರಯೋಜಕರಾಗಿಯೇ ಉಳಿದರೆಂದು ದೂರುವಂತಿಲ್ಲ. ಮೆಕಾಲೆ ಯುಗದಿಂದ ಹೊರಬಂದು ಯೋಚಿಸಿದಾಗ ಈ ಮಾತು ಅರ್ಥವಾಗುತ್ತದೆ. ಇಂದು ಕಾರಕೂನಿಕೆಗೆ ಪದವಿ ಬೇಕಿಲ್ಲ. ಸಂವಹನ ಶಕ್ತಿಯಿದ್ದು ಸ್ವಲ್ಪ ಅಕ್ಷರಜ್ಞಾನವಿದ್ದರೆ ಜೀವನೋಪಾಯಕ್ಕೆ ಒಂದು ಕೆಲಸ ಗಿಟ್ಟಿಸುವುದು ಕಷ್ಟವಲ್ಲ. ಆದರೆ ಹಾಗೆ ಕೆಲಸಕ್ಕೆ ಸೇರಿದ ಮೇಲೆ ಅವರಿಗೆ ವಿದ್ಯೆಯ ಮೌಲ್ಯ ತಿಳಿಯುತ್ತದೆ, ದುಡಿದ ಹಣದಲ್ಲಿ ಫೀಸು ತೆತ್ತು ಸಂಜೆ ಕಾಲೇಜಿಗೆ ಸೇರುತ್ತಾರೆ. ಅಧ್ಯಾಪಕನಾದ ನನ್ನ ಅನುಭವದಿಂದ ಹೇಳುವುದಾದರೆ, ಸಂಜೆ ಕಾಲೇಜಿನ ವಿದ್ಯಾರ್ಥಿಗಳಲ್ಲಿರುವ ಕಲಿಕೆಯ ಹಂಬಲ ಹಗಲು ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕಂಡುಬರುವುದಿಲ್ಲ. ಅಂದರೆ ಅವರು ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಬಹಳ ಅಂತರ ಕಂಡುಬರುತ್ತದೆ. ಹಾಗೆಂದ ಮಾತ್ರಕ್ಕೆ ಹಗಲು ಕಾಲೇಜಿನ ವಿದ್ಯಾರ್ಥಿಗಳಲ್ಲಿ ಹಂಬಲ ಇಲ್ಲವೆಂದಲ್ಲ, ಆದರೆ ಅದರ ಪ್ರಮಾಣ ಕಡಿಮೆ. ವಿದ್ಯೆಯೆಂಬುದು ದೀರ್ಘಕಾಲದ ತೊಡಗಿಸಿಕೊಳ್ಳುವಿಕೆ. ಒಂದನೆ ತರಗತಿಯಿಂದ ಪದವಿಯವರೆಗಿನ ನಮ್ಮ ಆಸಕ್ತಿಯನ್ನು ಅಲ್ಲಿ ಬಿತ್ತಿ ಬೆಳೆಯಬೇಕು. ಎಲ್ಲ ಬಂಡವಾಳ ಹೂಡುವಿಕೆಗೂ ಇರುವ ಒಂದು ಸಾಮಾನ್ಯಸೂತ್ರವೆಂದರೆ, ಹೂಡುವಿಕೆ ದೀರ್ಘಕಾಲದ್ದಾಗಿರಬೇಕು ಎಂಬುದು. ಪಕ್ವಗೊಳ್ಳುವ ಮುನ್ನವೇ ಬಂಡವಾಳವನ್ನು ಹಿಂತೆಗೆದುಕೊಂಡರೆ ಲಾಭವೂ ಖೋತ! ವಿದ್ಯೆಯು ಅಂತಹ ಒಂದು ಹೂಡಿಕೆ. ಇಲ್ಲಿ ತಾಳ್ಮೆ ಬಹು ಮುಖ್ಯ. ಇದನ್ನು ವಿದ್ಯಾರ್ಥಿಗಳೂ ಪೋಷಕರೂ ಅರಿತುಕೊಂಡರೆ ಕಲಿಕೆ ಮತ್ತಷ್ಟು ಸರಾಗ.

Wednesday, 10 June 2015

Yogamorons!

Yogamorons!

Morons who detest yoga in the name of religion or for the reason that it being not `secular' do not understand that yoga is pure science. I wish they visit NIMHANS once and see how the mentally challenged are drawing benfits out of yoga. Serious disorders too when treated with yoga get amazing results. It is not just chanting a mantra or bending a body, it is a science of balancing vital elements of human mind-body.

For example, depression, a common suffering in the modern world sometimes turns chronic and one of the treatments administered to severe depression is ECT(Electro Convulsive Therapy), experience of which a normal humanbeing can never ever imagine. A mild electric current is passed through the brain by placing electrodes strategically to stimulate frontal lobe of the brain. It is done under general anaesthesia, leaves the patient in a dazed condition for sometime and headache a common side effect. However most of the patients recover from chronic depression after ECT; but recovery is temporary! Medication, counselling, follow ups are a must even after ECT. Yoga has an anwer to this. BRAMARI PRANYAM is a natural stimulator of frontal lobes of brain. Few relaxing asanas, Naadishudhi pranayam, bramarai pranayam and sheethali pranayam helps these depression patients. And I have seen patients from all religions and all walks of life simply following the instructions of the yoga research centre at NIMHANS. Morons who desist yoga can get their brains baked by electric current, but sensible humanbeings irrespective of any religion they follow at home, will practice yoga to keep themselves healthy.

Hats off to Dr. Gangadhar and his team for the patience and persistence which keeps the special yoga research centre running in the campus. Even ordinary, normal humanbeings have natural(political, idiotic, religious) resistance to learn yoga but here the instructors work hard with the patients who have mental disorders!

I salute all the yoga teachers around the world. They are shaping beautiful minds! :-)

Monday, 1 June 2015

ರನ್‌ವೇ

ಸಂಪಾದಕೀಯ ಮೇ ೨೦೧೨

ರನ್‌ವೇ

ವಿಮಾನ ನಿಲ್ದಾಣಗಳನ್ನು ಕಂಡವರು, ಅದರ ಬಗ್ಗೆ ತಿಳಿದವರು ಬಲ್ಲರು ರನ್‌ವೇ ಎಂದರೆ ಏನು ಎಂಬುದನ್ನು. ಟನ್ ಗಟ್ಟಲೆ ತೂಗುವ ವಿಮಾನವೊಂದು ನೆಲ ಬಿಟ್ಟೇಳಲು ರನ್‌ವೇ ಬಳಸುತ್ತದೆ. ನಿಲ್ದಾಣದಿಂದ ನಿರ್ದಿಷ್ಟ ರನ್‌ವೇಗೆ ಮೆಲ್ಲನೆ ಸಾಗಿ ಅಲ್ಲಿ ಇಂಜಿನ್‌ಗಳ ಪೂರ್ಣ ಸಾಮರ್ಥ್ಯ ಬಳಸಿ ವೇಗವನ್ನು ಪಡೆದುಕೊಂಡು ನೆಲ ಬಿಟ್ಟೇಳುತ್ತದೆ. ಹೀಗೆ ಉಡ್ಡಯನಕ್ಕೆ ಬೇಕಾದ ವೇಗ ಗಳಿಸಿಕೊಳ್ಳಲು ರನ್‌ವೇ ಬಳಸಿಕೊಳ್ಳುತ್ತದೆ ವಿಮಾನ. ಈ ಸೂತ್ರವನ್ನು ಬದುಕಿಗೂ ಬಳಸಿಕೊಳ್ಳಬೇಕು ಎಂಬುದನ್ನು ಸೂಚಿಸುವುದೇ ಈ ಸಂಪಾದಕೀಯದ ಆಶಯ. ಬದುಕಿನಲ್ಲಿಯೂ ಟೇಕ್ ಆಫ್ ಆಗದವರು ಎಷ್ಟೋ ಮಂದಿ ಇದ್ದೇವೆ. ವಿಮಾನದಲ್ಲಿ ಕುಳಿತು ವಿಮಾನ ನಿಲ್ದಾಣದಲ್ಲಿಯೇ, ನೆಲದ ಮೇಲೆಯೇ ಸುತ್ತುಹೊಡೆದಂತೆ ಇರುವವರ ಬದುಕೂ ಇದೆ. ವೇಗ ಸಾಧಿಸಿ ಗಗನದಲ್ಲಿ ಹಾರಾಡುವ, ಆಕಾಶ ವಿಹಾರ ನಡೆಸುವ ಧೈರ್ಯವಿಲ್ಲದವರು ಇವರು. ಬದುಕಿನಲ್ಲಿ ರಿಸ್ಕ್‌ಗೆ ಹೆದರುವವರು ಎತ್ತರಕ್ಕೆ ಏರಲಾರರು.

ವಿಮಾನ ನೆಲ ಬಿಟ್ಟೇಳುವಾಗ, ಹಾರಾಟ ಮುಗಿಸಿ ಭೂಸ್ಪರ್ಶ ಮಾಡುವಾಗ ವಿಮಾನದಲ್ಲಿ ಕುಳಿತವರಿಗೆ ಒಂದು ಬಗೆಯ ಹೊಟ್ಟೆ ಕಲಕಿದ ಅನುಭವವಾಗುತ್ತದೆ. ಇದು ಸ್ಥಿರ-ಅಸ್ಥಿರ ಸ್ಥಿತಿಗಳ ನಡುವಣ ಸಂಧಿಕಾಲ. ಭೂಮಿಯ ಮೇಲಿದ್ದ ಒಡಲು ಆಕಾಶದಲ್ಲಿ ಹಾರುವ ಸ್ಥಿತಿಗೆ ತಲುಪುವ ಮೊದಲು ಒಂದು ಕ್ಷಣದ ಆತಂಕವನ್ನು ಅನುಭವಿಸುತ್ತದೆ. ಹಾಗೇ ತಲುಪುವಾಗಲೂ ಎತ್ತರದ ಮುಕ್ತ ಹಾರಾಟದಿಂದ ಭೂಮಿಗೆ ಕಾಲಿರಿಸುವ ಘಳಿಗೆಯಲ್ಲಿ ಹೃದಯ ಡವಗುಟ್ಟುತ್ತದೆ, ಹೊಟ್ಟೆ ಮಗಚುತ್ತದೆ. ಇವಾವ ಅನುಭವವೂ ಬೇಡವೆಂದರೆ ಸುಮ್ಮನೆ ಭೂಮಿಯ ಮೇಲೆ ಓಡಾಡಿಕೊಂಡಿರಬಹುದು. ಹಾರುವ ಸುಖ ಬೇಕೆಂದರೆ ಏರುವ ಕಷ್ಟ, ಮುಜುಗರ ಅನುಭವಿಸಲೇಬೇಕು. ಬೀಳುವ ಭಯ ಬಿಟ್ಟ ಹೊರತು ಸೈಕಲ್ ಕಲಿಯುವುದಿಲ್ಲ. ಅಂತಹುದರಲ್ಲಿ ಹಾರಲು ಮತ್ತಷ್ಟು ಧೈರ್ಯ ಬೇಕೇಬೇಕು.


ಲೌಕಿಕ ಜೀವನವಾಗಲಿ ಆಧ್ಯಾತ್ಮಿಕ ಜೀವನವಾಗಲಿ ರನ್‌ವೇ ತಲುಪಲೇಬೇಕು. ಬದುಕಿನೆತ್ತರದ ಗುರಿಗೆ ತಕ್ಕಂತೆ, ಆಶಯಕ್ಕೆ ತಕ್ಕಂತೆ ರನ್‌ವೇ ರೂಪಿಸಿಕೊಳ್ಳಬೇಕು. ಇವುಗಳ ತಾಳಮೇಳ, ಅಂದರೆ ವಿಮಾನದ ತೂಕ, ಏರಬೇಕಾದ ಎತ್ತರ, ರನ್‌ವೇಯ ಉದ್ದ, ಗಳಿಸಬೇಕಾದ ವೇಗ ಇವೆಲ್ಲ ಹೊಂದಿಕೆಯಾಗದಿದ್ದರೆ ವಿಮಾನ ಕುಸಿಯುತ್ತದೆ. ಜೀವನದ ಗುರಿಗೆ ತಕ್ಕ ದೇಹ ಸಾಮರ್ಥ್ಯ, ಅಂತಃಶಕ್ತಿ, ಸಾಧನೆಯ ಛಲ ಇರದಿದ್ದರೆ ಬದುಕು ಯಶಸ್ವಿಯಾಗುವುದಿಲ್ಲ. ವಿಷಾದದ ಛಾಯೆಯೊಂದಿಗೆ ಜೀವನಕ್ಕೆ ವಿದಾಯ ಹೇಳಬೇಕಾಗುತ್ತದೆ. ಉತ್ತಮ ಪದವಿ, ಸ್ಥಾನಮಾನ ಗಳಿಸಬೇಕಾದ ವಿಧ್ಯಾರ್ಥಿ ಕನಿಷ್ಠ ದಿನವೊಂದಕ್ಕೆ ಮೂರು ತಾಸು ಅಧ್ಯಯನ ಮಾಡಬೇಕು ಎನ್ನುತ್ತಾರೆ. ಆದರೆ ಯಶಸ್ವೀ ಅಭ್ಯರ್ಥಿಯನ್ನು ಕೇಳಿ ನೋಡಿ, ಅವನು ಪ್ರತಿದಿನ ಅದರ ಎರಡುಪಟ್ಟು, ಮೂರುಪಟ್ಟು ಶ್ರಮಿಸಿರುತ್ತಾನೆ. ಕನಿಷ್ಠವನ್ನೇ ಗರಿಷ್ಠ ಮಿತಿಯಾಗಿಸಿಕೊಂಡವರ ಬದುಕು ಮಿತಿಯೊಳಗೇ ನಿಂತುಬಿಡುತ್ತದೆ, ಅಪರಿಮಿತವನ್ನು ಸಾಧಿಸುವುದೇ ಇಲ್ಲ. ಮಂತ್ರಜಪ ಮಾಡುವ ಆರಂಭದಲ್ಲಿ ದಿನಕ್ಕೆ ೧೦೮ ಆದರೂ ಮಾಡಬೇಕು ಎಂಬ ನಿರ್ದೇಶನವಿರುತ್ತದೆ. ದೀಕ್ಷೆ ಪಡೆದು ಹತ್ತು ವರ್ಷವಾದರೂ ಅಷ್ಟೇ ಸಂಖ್ಯೆಯ ಜಪ ಮಾಡುತ್ತಿದ್ದರೆ ಈ ಆಧ್ಯಾತ್ಮಿಕ ಗುರಿಯು ವಿಮಾನ ನಿಲ್ದಾಣದಲ್ಲಿಯೇ, ನೆಲದ ಮೇಲೆಯೇ ಹರಿದಾಡುತ್ತಿದೆ ಎಂದರ್ಥ. ಎಷ್ಟೋ ಮಂದಿಯ ಬಳಿ ಅದ್ಭುತ ಯೋಜನೆಗಳಿರುತ್ತದೆ. ಅವು ಕಾರ್ಯರೂಪಕ್ಕೆ ಬರುವುದೇ ಇಲ್ಲ. ಬಾಯಿಮಾತಿನಲ್ಲೇ ಆವಿಯಾಗಿಹೋಗುವ ಯೋಜನೆಗಳಿಗಿಂತ ಅಲ್ಪಪ್ರಮಾಣದ ಆಚರಣೆ, ಅನುಷ್ಠಾನಗಳೇ ಉತ್ತಮ. ಮಂತ್ರದೀಕ್ಷೆ ಪಡೆದವರಿಗೆಲ್ಲ ಮುಕ್ತರಾಗುವ ಆಸೆಯಿದೆ. ಆದರೆ ಈ ಜನ್ಮದಲ್ಲೇ ಈಗಿಂದೀಗಲೇ ಮುಕ್ತಿಪಡೆಯುವ ಹಂಬಲ ಯಾರಿಗಿದೆ? ಹೀಗೆ ಮುಕ್ತರಾಗಿಬಿಟ್ಟರೆ ನಮ್ಮನ್ನು ನಂಬಿದವರ ಗತಿ ಏನು ಎಂಬ ಆತಂಕ! ಈ ಆತಂಕದಲ್ಲಿ ಸಾಧನೆ ಸುಮ್ಮನೆ ಯಾಂತ್ರಿಕ ಆಚರಣೆಯಾಗಿ ಈ ಆಧ್ಯಾತ್ಮಿಕ ವಿಮಾನ ಮ್ಯೂಸಿಯಮ್ಮಿನ ಮಾದರಿ ವಿಮಾನವಾಗಿಬಿಡುತ್ತದೆ. ವಿಮಾನವಿರುವುದು ಹಾರುವಿಕೆಗೇ ಹೊರತು ತೋರುವಿಕೆಗಲ್ಲ. ಬದುಕು ಇರುವುದು ಆತ್ಮದ ಅನಂತಶಕ್ತಿಯ ಹೊಮ್ಮುವಿಕೆಗೇ ಹೊರತು ಕೇವಲ ಜೀವಿಸುವಿಕೆಗಲ್ಲ. ಈಗ ನಾವು ಅಂತರೀಕ್ಷಣೆ ಮಾಡಿಕೊಳೋಣ - ನಮ್ಮ ಜೀವನ ವಿಮಾನ ಎಲ್ಲಿದೆ? ನಿಲ್ದಾಣದಲ್ಲೋ, ರನ್ ವೇಯಲ್ಲೋ, ಆಕಾಶದಲ್ಲೋ?!