ಸಂಪಾದಕೀಯ
ಮೇ ೨೦೧೨
ರನ್‌ವೇ
ವಿಮಾನ
ನಿಲ್ದಾಣಗಳನ್ನು ಕಂಡವರು, ಅದರ ಬಗ್ಗೆ ತಿಳಿದವರು
ಬಲ್ಲರು ರನ್‌ವೇ ಎಂದರೆ ಏನು ಎಂಬುದನ್ನು. ಟನ್ ಗಟ್ಟಲೆ ತೂಗುವ ವಿಮಾನವೊಂದು ನೆಲ ಬಿಟ್ಟೇಳಲು
ರನ್‌ವೇ ಬಳಸುತ್ತದೆ. ನಿಲ್ದಾಣದಿಂದ ನಿರ್ದಿಷ್ಟ ರನ್‌ವೇಗೆ ಮೆಲ್ಲನೆ ಸಾಗಿ ಅಲ್ಲಿ ಇಂಜಿನ್‌ಗಳ
ಪೂರ್ಣ ಸಾಮರ್ಥ್ಯ ಬಳಸಿ ವೇಗವನ್ನು ಪಡೆದುಕೊಂಡು ನೆಲ ಬಿಟ್ಟೇಳುತ್ತದೆ. ಹೀಗೆ ಉಡ್ಡಯನಕ್ಕೆ
ಬೇಕಾದ ವೇಗ ಗಳಿಸಿಕೊಳ್ಳಲು ರನ್‌ವೇ ಬಳಸಿಕೊಳ್ಳುತ್ತದೆ ವಿಮಾನ. ಈ ಸೂತ್ರವನ್ನು ಬದುಕಿಗೂ
ಬಳಸಿಕೊಳ್ಳಬೇಕು ಎಂಬುದನ್ನು ಸೂಚಿಸುವುದೇ ಈ ಸಂಪಾದಕೀಯದ ಆಶಯ. ಬದುಕಿನಲ್ಲಿಯೂ ಟೇಕ್ ಆಫ್
ಆಗದವರು ಎಷ್ಟೋ ಮಂದಿ ಇದ್ದೇವೆ. ವಿಮಾನದಲ್ಲಿ ಕುಳಿತು ವಿಮಾನ ನಿಲ್ದಾಣದಲ್ಲಿಯೇ, ನೆಲದ ಮೇಲೆಯೇ ಸುತ್ತುಹೊಡೆದಂತೆ ಇರುವವರ ಬದುಕೂ ಇದೆ. ವೇಗ ಸಾಧಿಸಿ
ಗಗನದಲ್ಲಿ ಹಾರಾಡುವ, ಆಕಾಶ ವಿಹಾರ ನಡೆಸುವ ಧೈರ್ಯವಿಲ್ಲದವರು
ಇವರು. ಬದುಕಿನಲ್ಲಿ ರಿಸ್ಕ್‌ಗೆ ಹೆದರುವವರು ಎತ್ತರಕ್ಕೆ ಏರಲಾರರು.
ವಿಮಾನ
ನೆಲ ಬಿಟ್ಟೇಳುವಾಗ, ಹಾರಾಟ ಮುಗಿಸಿ ಭೂಸ್ಪರ್ಶ
ಮಾಡುವಾಗ ವಿಮಾನದಲ್ಲಿ ಕುಳಿತವರಿಗೆ ಒಂದು ಬಗೆಯ ಹೊಟ್ಟೆ ಕಲಕಿದ ಅನುಭವವಾಗುತ್ತದೆ. ಇದು
ಸ್ಥಿರ-ಅಸ್ಥಿರ ಸ್ಥಿತಿಗಳ ನಡುವಣ ಸಂಧಿಕಾಲ. ಭೂಮಿಯ ಮೇಲಿದ್ದ ಒಡಲು ಆಕಾಶದಲ್ಲಿ ಹಾರುವ
ಸ್ಥಿತಿಗೆ ತಲುಪುವ ಮೊದಲು ಒಂದು ಕ್ಷಣದ ಆತಂಕವನ್ನು ಅನುಭವಿಸುತ್ತದೆ. ಹಾಗೇ ತಲುಪುವಾಗಲೂ
ಎತ್ತರದ ಮುಕ್ತ ಹಾರಾಟದಿಂದ ಭೂಮಿಗೆ ಕಾಲಿರಿಸುವ ಘಳಿಗೆಯಲ್ಲಿ ಹೃದಯ ಡವಗುಟ್ಟುತ್ತದೆ, ಹೊಟ್ಟೆ ಮಗಚುತ್ತದೆ. ಇವಾವ ಅನುಭವವೂ ಬೇಡವೆಂದರೆ ಸುಮ್ಮನೆ ಭೂಮಿಯ
ಮೇಲೆ ಓಡಾಡಿಕೊಂಡಿರಬಹುದು. ಹಾರುವ ಸುಖ ಬೇಕೆಂದರೆ ಏರುವ ಕಷ್ಟ, ಮುಜುಗರ ಅನುಭವಿಸಲೇಬೇಕು. ಬೀಳುವ ಭಯ ಬಿಟ್ಟ ಹೊರತು ಸೈಕಲ್
ಕಲಿಯುವುದಿಲ್ಲ. ಅಂತಹುದರಲ್ಲಿ ಹಾರಲು ಮತ್ತಷ್ಟು ಧೈರ್ಯ ಬೇಕೇಬೇಕು.
ಲೌಕಿಕ
ಜೀವನವಾಗಲಿ ಆಧ್ಯಾತ್ಮಿಕ ಜೀವನವಾಗಲಿ ರನ್‌ವೇ ತಲುಪಲೇಬೇಕು. ಬದುಕಿನೆತ್ತರದ ಗುರಿಗೆ ತಕ್ಕಂತೆ, ಆಶಯಕ್ಕೆ ತಕ್ಕಂತೆ ರನ್‌ವೇ ರೂಪಿಸಿಕೊಳ್ಳಬೇಕು. ಇವುಗಳ ತಾಳಮೇಳ, ಅಂದರೆ ವಿಮಾನದ ತೂಕ,
ಏರಬೇಕಾದ ಎತ್ತರ, ರನ್‌ವೇಯ ಉದ್ದ,
ಗಳಿಸಬೇಕಾದ ವೇಗ ಇವೆಲ್ಲ
ಹೊಂದಿಕೆಯಾಗದಿದ್ದರೆ ವಿಮಾನ ಕುಸಿಯುತ್ತದೆ. ಜೀವನದ ಗುರಿಗೆ ತಕ್ಕ ದೇಹ ಸಾಮರ್ಥ್ಯ, ಅಂತಃಶಕ್ತಿ,
ಸಾಧನೆಯ ಛಲ ಇರದಿದ್ದರೆ
ಬದುಕು ಯಶಸ್ವಿಯಾಗುವುದಿಲ್ಲ. ವಿಷಾದದ ಛಾಯೆಯೊಂದಿಗೆ ಜೀವನಕ್ಕೆ ವಿದಾಯ ಹೇಳಬೇಕಾಗುತ್ತದೆ.
ಉತ್ತಮ ಪದವಿ, ಸ್ಥಾನಮಾನ ಗಳಿಸಬೇಕಾದ
ವಿಧ್ಯಾರ್ಥಿ ಕನಿಷ್ಠ ದಿನವೊಂದಕ್ಕೆ ಮೂರು ತಾಸು ಅಧ್ಯಯನ ಮಾಡಬೇಕು ಎನ್ನುತ್ತಾರೆ. ಆದರೆ ಯಶಸ್ವೀ
ಅಭ್ಯರ್ಥಿಯನ್ನು ಕೇಳಿ ನೋಡಿ, ಅವನು ಪ್ರತಿದಿನ ಅದರ
ಎರಡುಪಟ್ಟು, ಮೂರುಪಟ್ಟು ಶ್ರಮಿಸಿರುತ್ತಾನೆ. ಕನಿಷ್ಠವನ್ನೇ
ಗರಿಷ್ಠ ಮಿತಿಯಾಗಿಸಿಕೊಂಡವರ ಬದುಕು ಮಿತಿಯೊಳಗೇ ನಿಂತುಬಿಡುತ್ತದೆ, ಅಪರಿಮಿತವನ್ನು ಸಾಧಿಸುವುದೇ ಇಲ್ಲ. ಮಂತ್ರಜಪ ಮಾಡುವ ಆರಂಭದಲ್ಲಿ
ದಿನಕ್ಕೆ ೧೦೮ ಆದರೂ ಮಾಡಬೇಕು ಎಂಬ ನಿರ್ದೇಶನವಿರುತ್ತದೆ. ದೀಕ್ಷೆ ಪಡೆದು ಹತ್ತು ವರ್ಷವಾದರೂ
ಅಷ್ಟೇ ಸಂಖ್ಯೆಯ ಜಪ ಮಾಡುತ್ತಿದ್ದರೆ ಈ ಆಧ್ಯಾತ್ಮಿಕ ಗುರಿಯು ವಿಮಾನ ನಿಲ್ದಾಣದಲ್ಲಿಯೇ, ನೆಲದ ಮೇಲೆಯೇ ಹರಿದಾಡುತ್ತಿದೆ ಎಂದರ್ಥ. ಎಷ್ಟೋ ಮಂದಿಯ ಬಳಿ ಅದ್ಭುತ
ಯೋಜನೆಗಳಿರುತ್ತದೆ. ಅವು ಕಾರ್ಯರೂಪಕ್ಕೆ ಬರುವುದೇ ಇಲ್ಲ. ಬಾಯಿಮಾತಿನಲ್ಲೇ ಆವಿಯಾಗಿಹೋಗುವ
ಯೋಜನೆಗಳಿಗಿಂತ ಅಲ್ಪಪ್ರಮಾಣದ ಆಚರಣೆ, ಅನುಷ್ಠಾನಗಳೇ ಉತ್ತಮ.
ಮಂತ್ರದೀಕ್ಷೆ ಪಡೆದವರಿಗೆಲ್ಲ ಮುಕ್ತರಾಗುವ ಆಸೆಯಿದೆ. ಆದರೆ ಈ ಜನ್ಮದಲ್ಲೇ ಈಗಿಂದೀಗಲೇ
ಮುಕ್ತಿಪಡೆಯುವ ಹಂಬಲ ಯಾರಿಗಿದೆ? ಹೀಗೆ ಮುಕ್ತರಾಗಿಬಿಟ್ಟರೆ
ನಮ್ಮನ್ನು ನಂಬಿದವರ ಗತಿ ಏನು ಎಂಬ ಆತಂಕ! ಈ ಆತಂಕದಲ್ಲಿ ಸಾಧನೆ ಸುಮ್ಮನೆ ಯಾಂತ್ರಿಕ ಆಚರಣೆಯಾಗಿ
ಈ ಆಧ್ಯಾತ್ಮಿಕ ವಿಮಾನ ಮ್ಯೂಸಿಯಮ್ಮಿನ ಮಾದರಿ ವಿಮಾನವಾಗಿಬಿಡುತ್ತದೆ. ವಿಮಾನವಿರುವುದು
ಹಾರುವಿಕೆಗೇ ಹೊರತು ತೋರುವಿಕೆಗಲ್ಲ. ಬದುಕು ಇರುವುದು ಆತ್ಮದ ಅನಂತಶಕ್ತಿಯ ಹೊಮ್ಮುವಿಕೆಗೇ
ಹೊರತು ಕೇವಲ ‘ಜೀವಿಸು’ವಿಕೆಗಲ್ಲ. ಈಗ ನಾವು ಅಂತರೀಕ್ಷಣೆ ಮಾಡಿಕೊಳೋಣ -
ನಮ್ಮ ಜೀವನ ವಿಮಾನ ಎಲ್ಲಿದೆ? ನಿಲ್ದಾಣದಲ್ಲೋ, ರನ್ ವೇಯಲ್ಲೋ,
ಆಕಾಶದಲ್ಲೋ?!
No comments:
Post a Comment