ಆಧುನಿಕ ಹರಿಶ್ಚಂದ್ರರು
ಮನೆಯಿಂದ ಕಾಲೇಜಿಗೆ ಹೋಗುವ ದಾರಿಯಲ್ಲಿ ಮುಂಜಾನೆ ಗಮನಿಸುತ್ತೇನೆ. ಬಸ್ ನಿಲ್ದಾಣದ ಚೌಕದಲ್ಲಿ ನಾಲ್ಕು ರಸ್ತೆ ಕೂಡುವೆಡೆಯಲ್ಲಿ ನಾಲ್ಕೂ ದಿಕ್ಕಿನ ಫುಟ್‌ಪಾತ್‌ಗಳ ಮೇಲೆ ಬುತ್ತಿಗಂಟು ಹಿಡಿದ ಜನರ ದಂಡು. ಗಂಡು-ಹೆಣ್ಣಾಳುಗಳು ಅಂದಿನ ದಿನಗೂಲಿಗೆ ಕಾದು ನಿಂತಿರುತ್ತಾರೆ. ಬಳಿಕ ಮೇಸ್ತ್ರಿಗಳ ಆಗಮನ, ಮೋಟಾರ್‌ಬೈಕ್‌ಗಳಲ್ಲಿ. ಜಾತ್ರೆಯಲ್ಲಿ ಕುರಿಗಳನ್ನು ಅಳೆವಂತೆ ಕಣ್ಣೋಟದಲ್ಲಿ ಈ ಜನರ ದಂಡನ್ನಳೆದು ಕೆಲವರನ್ನು ಆಯ್ಕೆ ಮಾಡಿ ತಾವು ತಂದ ಟೆಂಪೊ ಇತ್ಯಾದಿ ದೊಡ್ಡ ವಾಹನದಲ್ಲಿ ತುಂಬಿಕೊಂಡು ಕೆಲಸ ನಡೆಯಬೇಕಾದ ಸ್ಥಳಗಳಿಗೆ ಇವರನ್ನು ರವಾನಿಸಿಬಿಡುತ್ತಾರೆ. ಇದಿಷ್ಟೂ ವ್ಯವಹಾರ ನಗರದ ನಮ್ಮಂತಹ ಸಾಹೇಬರು ಆಫೀಸಿಗೆ ಹೊರಡುವ ಮುನ್ನ ನಡೆದುಹೋಗುತ್ತದೆ; ಅಂದರೆ ಬೆಳಗಿನ ೭.೩೦ರಿಂದ ೯ರೊಳಗಿನ ಅವಧಿಯಲ್ಲಿ ಮುಗಿದುಹೋಗುತ್ತದೆ. ಯಾವುದೇ ಉದ್ಯೋಗ ಭದ್ರತೆಯಿಲ್ಲದ, ಭರವಸೆಯಿಲ್ಲದ; ನಿತ್ಯ ತಮ್ಮನ್ನು ತಾವು ಮಾರುಕಟ್ಟೆಯ ಚೌಕದಲ್ಲಿ ಮಾರಿಕೊಳ್ಳುವ ಆಧುನಿಕ ಹರಿಶ್ಚಂದ್ರರು ಇವರು. ಇವರಿಗೆ ಯಾವ ಬಜೆಟ್ ಅನ್ವಯವಾಗುತ್ತದೆ ಎಂದು ಚಿಂತಿಸುತ್ತೇನೆ.
ಭಾರತದಲ್ಲಿ ಇಂತಹ ಅಸಂಘಟಿತ ಶ್ರಮಿಕವರ್ಗ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ವಿಫಲವಾಗುತ್ತಿದೆ. ಹೆಚ್ಚಿನ ಸಂದರ್ಭಗಳಲ್ಲಿ ಇವರು ಶೋಷಣೆಗೆ ಒಳಗಾಗುತ್ತಾರೆ. ಗಾರೆ ಸಿಮೆಂಟುಗಳ ಒಡನಾಟದಲ್ಲಿ ಬೆಳೆವ ಇಂತಹವರ ಮಕ್ಕಳು ಅದೆಷ್ಟು ಬಾರಿ ಸಂಪಿನ ತಳ ಕಂಡಿಲ್ಲ? ಲಾರಿಯ ಚಕ್ರಕ್ಕೆ ಬಲಿಯಾಗಿಲ್ಲ? ಕಟ್ಟಡಕಾರ್ಯ ನಡೆಯುವ ಸಮೀಪವೇ ಮರದ ಜೋಲಿಯಲ್ಲಿ ಮಲಗಿರುವ ಹಸುಗೂಸುಗಳನ್ನು ಕಂಡಾಗೆಲ್ಲ ಕರುಳು ಚುರುಗುಟ್ಟುತ್ತದೆ. ಈ ಕೂಸು ಕಾಣುವ ಕನಸು ನಮ್ಮ ಕೂಸಿನ ಕನಸಿಗಿಂತ ಹೇಗೆ ಭಿನ್ನ? ಶಿಕ್ಷಣದ ಹಕ್ಕು ಇರಲಿ ಶೈಶವದ ಹಕ್ಕೂ ಇವುಗಳಿಗೆ ಲಭ್ಯವಿಲ್ಲ. ನೂರಾರು ಮನೆಕಟ್ಟಿದರೂ ಇವರು ನೆಲೆಸುವುದು ತಮ್ಮ ಜೋಪಡಿಗಳಲ್ಲೇ. ಶ್ರಮಿಕ ವರ್ಗವೆಂದರೆ ಶೋಷಿತವರ್ಗವಾಗಬೇಕಿಲ್ಲ. ಎಲ್ಲರಂತೆ ಬದುಕುವ ಹಕ್ಕು, ಬೆಳೆಯುವ ಅವಕಾಶ ಇಂತಹವರಿಗೆ ದೊರೆಯುವಂತೆ ಮಾಡದ ಹೊರತು ಈ ಜನ ಹೀಗೇ ಇರುತ್ತಾರೆ. ಎಲ್ಲಿಯವರೆಗೆ ಇವರು ಹೀಗಿರುತ್ತಾರೋ ಅಲ್ಲಿಯವರೆಗೆ ಭಾರತ ‘ಮುಂದುವರಿಯುತ್ತಿರುವ’ ದೇಶವೆಂದೇ ಪರಿಗಣಿಸಲ್ಪಡುತ್ತದೆ.
ವಿದ್ಯಾವಂತರೂ ಪ್ರಗತಿಹೊಂದಿದವರೂ ಕೂಡ ಮಾರಿಕೊಂಡಿದ್ದೇವೆ; ನಮ್ಮಗಳ ಆತ್ಮಸಾಕ್ಷಿಯನ್ನು. ನಾವೂ ಹರಿಶ್ಚಂದ್ರರೇ. ಮಾರುಕಟ್ಟೆಯಲ್ಲಿ ಸ್ವಾರ್ಥಸಾಧನೆಯ ಲೋಭಕ್ಕೆ ಒಳಗಾಗಿ ನಮ್ಮ ಮೌಲ್ಯಗಳನ್ನು ಮರೆತಿದ್ದೇವೆ. ನಕ್ಷತ್ರಿಕನನ್ನು ಕಡೆಗಣಿಸಿ ದಿಕ್ಕುತಪ್ಪಿದ್ದೇವೆ. ಕ್ಷಣಿಕ ತೃಪ್ತಿಗಾಗಿ ಮನಗಳನ್ನು ಮಾರಿಕೊಂಡಿದ್ದೇವೆ. ಹೀಗಾಗಿ ಭ್ರಷ್ಟಾಚಾರ, ಲಂಚಕೋರತನ ಸಹಜವೆನಿಸಿಹೋಗಿವೆ. ಆದರೆ ಪರಿಸ್ಥಿತಿ ಹೀಗೇ ಮುಂದುವರಿಯಲು ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದರ ಮಾತುಗಳೇ ತಿಳಿಸುವಂತೆ ಮೇಲ್ವರ್ಗವು ಪ್ರೀತಿಯಿಂದ ಕೊಡದಿದ್ದರೆ ಬಲವಂತದಿಂದ ಅವರಿಂದ ಕಿತ್ತುಕೊಳ್ಳಲಾಗುವುದು. ಇದು ಪ್ರಕೃತಿನಿಯಮವೂ ಹೌದು, ಸಾಮಾಜಿಕ ನಿಯಮವೂ ಹೌದು. ಹಮ್ಮುಬಿಮ್ಮು ಮರೆತು ವಿನಯ ಸೌಜನ್ಯಗಳಿಂದ ಎಲ್ಲರ ಹಿತಚಿಂತನೆ ಮಾಡುವುದು ಇಂದಿನ ಆವಶ್ಯಕತೆ. ಶ್ರೀರಾಮಕೃಷ್ಣರ ಬದುಕನ್ನು ಮತ್ತೊಮ್ಮೆ ಓದಬೇಕು, ಮಾನವೀಯ ಮೌಲ್ಯವಿವೇಚನೆಯ ಹಿನ್ನೆಲೆಯಲ್ಲಿ. ಅವರ ದೈವತ್ವ ನಮಗೆಟಕುವುದು ಕಷ್ಟವಾದರೂ ಅವರ ಬದುಕಿನಲ್ಲಿ ಕಂಡುಬರುವ ಮಾನವಪ್ರೇಮ, ಕಾಳಜಿ, ಮನುಷ್ಯರ ಬಗೆಗಿನ ಷರತ್ತುರಹಿತಪ್ರೀತಿ ಇವುಗಳನ್ನು ಅಭ್ಯಸಿಸಬೇಕು. ಸತ್ಯದ ಬದುಕು ಮಾತಿನದಲ್ಲ ಕೃತಿಯದು. ಇಂತಹ ಬದುಕಿನಿಂದ ಮಾತ್ರ ಕೃತಕೃತ್ಯತೆ ಸಾಧ್ಯ. ಬದುಕಿಗಾಗಿ ಮೌಲ್ಯ ಮಾರುವ ಹರಿಶ್ಚಂದ್ರರಾಗದೆ ಮೌಲ್ಯಕ್ಕಾಗಿ ಬದುಕನ್ನು ಪಣವಿಡುವ ಹರಿಶ್ಚಂದ್ರರಾಗೋಣ.
No comments:
Post a Comment