ಸಂಪಾದಕೀಯ, ವಿವೇಕಹಂಸ, ಜೂನ್ ೨೦೧೨
ಶೇಕಡಾ ಎಷ್ಟು?
ಪರೀಕ್ಷೆಯ ಫಲಿತಾಂಶಗಳು
ಹೊರಬಂದಿವೆ. ವರ್ಷಾಂತ್ಯದ ಓದಿನ ಸುಗ್ಗಿಯ ಕಣದಲ್ಲಿ ಜಳ್ಳು ತೂರಿ ಕಾಳು ಉಳಿಸಿಕೊಂಡೆವೆಂಬ
ಭ್ರಮೆಯಲ್ಲಿ ನಾವಿದ್ದೇವೆ. ಮುಂದಿನ ನಡೆಯ ಬಗ್ಗೆ ಎಲ್ಲರ ಗಮನ. ಓದು ಜೀವನದ ಒಂದು ಭಾಗ, ಉಳಿದ ಭಾಗಗಳನ್ನು ತುಂಬಿಕೊಳ್ಳಲು ಇದು ನೆರವಾಗುತ್ತದೆಯೇ ಹೊರತು ಇದೇ
ಎಲ್ಲವೂ ಅಲ್ಲ. ದುರದೃಷ್ಟವೆಂದರೆ ಇಂದಿನ ಜಗತ್ತಿನಲ್ಲಿ ವಿದ್ಯಾರ್ಥಿಗಳು ಓದಿನ
ಮೂಟೆಯಾಗುತ್ತಿದ್ದಾರೆಯೇ ಹೊರತು ಉತ್ಸಾಹದ ಊಟೆಯಾಗುತ್ತಿಲ್ಲ. ಆಟ-ಊಟ-ಪಾಠದ ಬದಲಾಗಿ ಪಾಠ-(ಊಟದ
ಜೊತೆಗೂ)ಪಾಠ-ಪಾಠದ ಪರಿಪಾಟಿ ಬೆಳಯುತ್ತಿದೆ. ಹದಿಹರೆಯದ ಮಕ್ಕಳು ತಮ್ಮ ಸಹಜ ವಿಕಾಸ ಪಡೆಯುವಲ್ಲಿ
ತಡೆಯಾಗುತ್ತಿದೆ ಓದಿನ ಒತ್ತಡ. ಇದರಿಂದ ವ್ಯಕ್ತಿಯಾಗಲೀ ಸಮಾಜವಾಗಲೀ ಪಡೆಯುವ ಪ್ರಯೋಜನವೇನು?
ನನ್ನ ವೈದ್ಯಮಿತ್ರರೊಬ್ಬರು ಕೋಳಿಫಾರಂನ ಕೋಳಿಗಳನ್ನು
ಬೆಳೆಸುವ ಕ್ರೌರ್ಯವನ್ನು ಕುರಿತು ಹೇಳುತ್ತಾ, “ ಅವುಗಳ ದೇಹದ ತೂಕ ವೃದ್ಧಿಸಲು ಸ್ಟೆರಾಯ್ಡ್‌ಯುಕ್ತ ಆಹಾರವನ್ನು ನೀಡುತ್ತಾರೆ.
ಪರಿಣಾಮವೇನಾಗುತ್ತದೆಂದರೆ ಅದರ ಕಾಲಿನ ವಯಸ್ಸು ಮೂರು ತಿಂಗಳಿನದಾದರೆ ಅದು ಹೊರುವುದು
ಆರುತಿಂಗಳಿನ ತೂಕದ ದೇಹದ ಭಾರ!”. ನಮ್ಮ ಮಕ್ಕಳಿಗೂ
ಇದನ್ನು ಅನ್ವಯಿಸಬಹುದೆ? ಎಲ್ಲರೂ ಉತ್ತಮ ಅಂಕ ಗಳಿಸುವ
ಹಪಾಪಿಯಲ್ಲಿ ಬೆಳಗ್ಗೆ ಸಂಜೆ ಮನೆಪಾಠ, ದಿನವಿಡೀ ಶಾಲೆಯ ಪಾಠ. ಅವರ ದೇಹ ಚಿಕ್ಕದಾದರೂ ನಾವು ಬಯಸುವುದು
ಅದರೊಳಗೆ ವಿಶ್ವೇಶ್ವರಯ್ಯನವರ ಮಿದುಳನ್ನು!
ಓದು ಬೇಕು ನಿಜ. ಆದರೆ ಎಷ್ಟು
ಎಂಬ ಆಯ್ಕೆ ಅವರವರ ಸಾಮರ್ಥ್ಯಕ್ಕೆ ಬಿಟ್ಟಿದ್ದು.
ಓದಿದವರೆಲ್ಲ ಸಮಾಜಕ್ಕೆ
ಉಪಕಾರಿಗಳಾಗುತ್ತಾರೆ ಎಂಬ ಖಾತರಿಯಿಲ್ಲ. ಮಾಹಿತಿಸಂಗ್ರಹ ಮಾಡಿಕೊಂಡ ಮನುಷ್ಯ ಅದನ್ನು ಒಳಿತಿಗೂ
ಬಳಸಬಹುದು, ಕೆಟ್ಟದಕ್ಕೂ ಬಳಸಬಹುದು.
ಬುದ್ಧಿವಂತಿಕೆಯೊಂದಿಗೆ ಹೃದಯವಂತಿಕೆಯನ್ನು ಮೂಡಿಸದಿದ್ದರೆ ಅದನ್ನು ಶಿಕ್ಷಣವೆನ್ನಲಾಗದು. ಹಿಂದೆ
ರಾಕ್ಷಸರಿದ್ದರಂತೆ. ತಪಸ್ಸು ಮಾಡಿ ಬೇಕಾದ್ದನ್ನು ಪಡೆಯುತ್ತಿದ್ದರು, ಸ್ವರ್ಗವನ್ನೂ ವಶಪಡಿಸಿಕೊಳ್ಳುತ್ತಿದ್ದರು, ಬಳಿಕ ಲೋಕಕಂಟಕರಾಗಿ ಕ್ರಮೇಣ ಅಧೋಗತಿಗೆ ಇಳಿದು ನಾಶವಾಗುತ್ತಿದ್ದರು.
ತಪಸ್ಸಿನ ಪುಣ್ಯದ ಫಲವಾಗಿ ಪಡೆದುಕೊಂಡದ್ದನ್ನು ಪಾಪಾರ್ಜನೆ ಮಾಡಿ ಕಳೆದುಕೊಳ್ಳುತ್ತಿದ್ದರು.
ಹೀಗೆ ಶಿಕ್ಷಣವನ್ನು ಸ್ವಂತಕ್ಕಾಗಿ ಸ್ವಾರ್ಥಕ್ಕಾಗಿ ಬಳಸಿಕೊಂಡವರು ಹಾಳಾಗುತ್ತಾರೆ. ಶಿಕ್ಷಣ
ಬುದ್ಧಿಗಷ್ಟೇ ಅಲ್ಲ ಹೃದಯಕ್ಕೂ. ನಮ್ಮ ಮಗು ಎಷ್ಟು ಅಂಕ ಗಳಿಸಿದೆ ಎಂಬುದು ಮುಖ್ಯವಲ್ಲ, ಅದು ಈ ಜಗತ್ತಿನೊಂದಿಗೆ ಎಷ್ಟರಮಟ್ಟಿಗಿನ ಸಂಬಂಧವನ್ನು
ಸ್ಥಾಪಿಸಿಕೊಂಡಿದೆ ಎಂಬುದು ಮುಖ್ಯ. ಮಗಳನ್ನು ರಜೆಯಲ್ಲಿ ಹಳ್ಳಿಗೆ ಕರೆದೊಯ್ದಿದ್ದೆ. ಎದುರಿನ
ಕುರಿದೊಡ್ಡಿಯಲ್ಲಿ ಅದೇತಾನೆ ಕುರಿ ಮರಿ ಹಾಕಿತ್ತು. ಮರಿಯನ್ನು ಮುದ್ದಿಸಲು ಮಗಳು
ಅಪೇಕ್ಷಿಸಿದಳು. ಮರಿಯನ್ನು ತರಿಸಿದೆ. ಐದಾರು ನಿಮಿಷದ ಬಳಿಕ ಹತ್ತಿರವಿದ್ದ ಹಳ್ಳಿಯ ಬಾಲಕ ಹೇಳಿದ,
“ಸ್ವಾಮಿ, ಕುರಿ ಬಡ್ಕತೈತೆ,
ಮರಿ ಕೊಡಿ ತಾಯಿ ತಾವ ಬುಡ್ತೀನಿ”. ನಮ್ಮ ಕೃತಕ ಪ್ರೀತಿಯ ಪೂರದಲ್ಲಿ ನಮಗೆ ತಾಯಿಕುರಿಯ ಕರೆ ಕೇಳಿಸಿರಲೇ
ಇಲ್ಲ! ಆ ಹುಡುಗ ನನ್ನಂತೆ ವಿದ್ಯಾವಂತನಲ್ಲ ಆದರೆ ಹೃದಯವಂತ.ಪ್ರಯೋಗಾಲಯದಲ್ಲಿ ನೂರಾರು
ಕಪ್ಪೆಗಳನ್ನು ಕೊಯ್ದು ಅವುಗಳ ಅಧ್ಯಯನ ಮಾಡುವದಕ್ಕಿಂತ ಮಳೆಗಾಲದ ರಾತ್ರಿಯಲ್ಲಿ ಅವುಗಳ ಸಮೂಹ
ಗಾಯನ ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ಮುದವಿದೆ. ಶೇಕಡವಾರು ಅಂಕಗಳಿಕೆಗಿಂತ ಅರಿವನ್ನು
ವಿಸ್ತರಿಸಿಕೊಳ್ಳುವಲ್ಲಿ ಮಹತ್ತಿದೆ.
No comments:
Post a Comment