Tuesday, 28 July 2015

ಯಾಕೂಬನೆಂಬ ಖೂಳನೂ ನರಹರಿದ ಕ್ಷುದ್ರಜೀವಿಗಳೂ.......

ಯಾಕೂಬನೆಂಬ ಖೂಳನೂ ನರಹರಿದ ಕ್ಷುದ್ರಜೀವಿಗಳೂ.......

ಯಾಕೂಬನಿಗೆ ಗಲ್ಲು ಬೇಡವೆಂದು ಕೆಲವರು ಚೀರಾಡಿದ್ದು ಕೇಳಿ ಅನಾಮಿಕ ಗೋರಿಯಲ್ಲಿರುವ ಕಸಬ್ ಮತ್ತೊಮ್ಮೆ ಕಿಸಕ್ ಅಂತ ನಕ್ಕ.

ನಾನು ಸಾಮಾನ್ಯವಾಗಿ ತಾಳ್ಮೆಗೆಡುವವನಲ್ಲ. ಹಾಗೆಂದ ಮಾತ್ರಕ್ಕೆ ಶಿಕ್ಷೆ ವಿಧಿಸುವುದೇ ತಪ್ಪು ಎಂದು ಹೇಳುವವನಲ್ಲ. ಮೊನ್ನೆ ತಾನೇ ಕಾಲೇಜಿನ ಕಾರಿಡಾರ್ ಅಲ್ಲಿ ಮೇಷ್ಟ್ರುಗಳು ಒಬ್ಬ ವಿದ್ಯಾರ್ಥಿಗೆ ರಿಪೇರಿ ಮಾಡುತ್ತಿದ್ದರು. ನಾನು ಆಮೇಲೆ ಅವರನ್ನು ಕರೆಸಿ ಕೇಳಿದೆ, “ ಸಾರ್, ಅವನು ಇನ್ನೊಬ್ಬ ಅಮಾಯಕ ವಿದ್ಯಾರ್ಥಿಗೆ ತರಗತಿಯಲ್ಲಿ ಬಾಸುಂಡೆ ಬರುವಂತೆ ಬಾರಿಸಿದ್ದ....” ಅಂದರು. ನಾನು ಸುಮ್ಮನಾದೆ. ಇಂತಹ ಸಂದರ್ಭಗಳಲ್ಲಿ ನಾನು ಬಳಸುವ ಮಾನದಂಡ ಒಂದೇ, ‘ಈ ವಿದ್ಯಾರ್ಥಿಯ ಜಾಗದಲ್ಲಿ ನನ್ನ ಮಗ/ಮಗಳು ಇದ್ದಿದ್ದರೆ ನಾನೇನು ಮಾಡುತ್ತಿದ್ದೆ?’ ಎಂಬ ಪ್ರಶ್ನೆ ಕೇಳಿಕೊಳ್ಳುತ್ತೇನೆ. ಅದು ತಪರಾಕಿ ಕೊಡುವಂತಹ ತಪ್ಪಾಗಿದ್ದರೆ ಖಂಡಿತ ಮುಲಾಜಿಲ್ಲದೆ ಬಾರಿಸುವುದೇ. ನೋಯಿಸುವವರಿಗೆ ನೋವಿನ ಅನುಭವ ಮಾಡಿಸದೆ ವಿಧಿಯಿಲ್ಲ.

ಮತ್ತೊಬ್ಬರಿಗೆ ಸಾವನ್ನು ಬಯಸುವ ನೀಚನೂ ನಾನಲ್ಲ. ಆದರೆ ಈ ನೆಲ, ಜಲ, ಜನದ ವಿರುದ್ಧ ಯುದ್ಧಸಾರಿದವನನ್ನು, ನೂರಾರು ಅಮಾಯಕರನ್ನು ಕೊಂದವನನ್ನು ಬಿಟ್ಟುಬಿಡಿರೆಂದು ಹೇಳುವುದು ತಪ್ಪು. ಸಂಚಿನಲ್ಲಿ ಅವನ ಪಾತ್ರ ಖಚಿತವಾದದ್ದರಿಂದಲೇ ಮರಣದಂಡನೆ ವಿಧಿಸಲಾಗಿದೆ. ಜೀವ ಕೊಡುವ ಶಕ್ತಿ ಇಲ್ಲದ ಮೇಲೆ ಯಾಕೂಬನ ಜೀವ ತೆಗೆದರೇನು ಪ್ರಯೋಜನ? ಎಂದು ಕೇಳುವವರು ತಮ್ಮ ಮನೆಯವರ ಮೇಲೆ ಕೈಮಾಡಿದವರಿಗೆ ಕಪಾಳಕ್ಕೆ ಬಾರಿಸುತ್ತಾರೋ, ಕೈ ಮುಗಿಯುತ್ತಾರೋ? ೧೯೯೩ ರ ಮುಂಬೈ ಬಾಂಬ್ ದಾಳಿಯಲ್ಲಿ ಸತ್ತವರು ೨೫೭ ಮಂದಿ, ಗಾಯಗೊಂಡವರು ೭೧೩ ಮಂದಿ. ಈ ನೊಂದ ಬೆಂದ ಕುಟುಂಬದವರೆಲ್ಲ ಅವನನ್ನು ಕ್ಷಮಿಸುತ್ತಾರೆಯೇ? ಕೇಳಿ ನೋಡಿ, ಕಪಾಳಕ್ಕೆ ಹೊಡೆಯುತ್ತಾರೆ! ಇನ್ನು ಈ ತೀರ್ಪು ಬಂದಿರುವುದು ನ್ಯಾಯಾಲಯದಿಂದಲೇ ಹೊರತು ಯಾವುದೋ ತಳವಿಲ್ಲದ ಅರಿವಿನಿಂದಲ್ಲ. ಇಷ್ಟೊಂದು ಹೆಚ್ಚಿನ ಶಿಕ್ಷೆ ವಿಧಿಸಬೇಕೆಂದರೆ ಅದು ಗುರುತರವಾದ ಅಪರಾಧವೇ ಆಗಿರುತ್ತದೆ. ಇನ್ನು ಕಾನೂನಿನ ಎಲ್ಲ ಮಾರ್ಗಗಳನ್ನು ಅನುಸರಿಸಿ ಆತ ಕುಣಿಕೆಯಿಂದ ತಪ್ಪಿಸಿಕೊಳ್ಳಲು ನೋಡಿದ್ದಾನೆ, ಈ ನೆಲದ ಕಾನೂನು ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಬಳಿಕ ರಾಷ್ಟ್ರಪತಿಗಳಿಗೂ ಆತ ಮನವಿ ಸಲ್ಲಿಸಿದ್ದಾನೆ. ಈಗ ನಾವು ಆಲೋಚಿಸಬೇಕಾದ್ದು ಎಲ್ಲ ನ್ಯಾಯಾಧೀಶರಿಗಿಂತ, ರಾಷ್ಟ್ರಪತಿಗಳಿಗಿರುವ ಕಾನೂನು ಪರಿಣಿತಿ, ಅವರ ಕಾನೂನು ಸಲಹೆಗಾರರಿಗಿಂತ ನಮ್ಮ ಬುದ್ಧಿಜೀವಿಗಳಿಗೆ ಒಂದು ಔನ್ಸು ಬುದ್ಧಿ ಜಾಸ್ತಿಯಿದೆಯೇ ಎಂದು!

ಇನ್ನು ಈ ಪಾತಕಿಯನ್ನು ನಮ್ಮ ದೇಶದ ಸ್ವಾತಂತ್ರವೀರರಿಗೆ, ಹುತಾತ್ಮರಿಗೆ ಹೋಲಿಸಿದವರೂ ಇದ್ದಾರೆ. ಭಗತ್ ಸಿಂಗ್, ರಾಜಗುರು ಇವರೆಲ್ಲ ಲಂಡನ್ ಗೆ ನುಗ್ಗಿ ಅಲ್ಲಿನ ಅಮಾಯಕ ಪ್ರಜೆಗಳನ್ನು ಬಾಂಬಿಕ್ಕಿ ಕೊಂದರೆ? ಹೋಲಿಕೆಗೊಂದು ಮಿತಿ ಬೇಡವೆ? ಸ್ಯಾಂಡರ್ಸ್ ನನ್ನು ಕೊಂದ ಬಳಿಕ ಅಟ್ಟಿಸಿಕೊಂಡು ಬಂದ ಭಾರತೀಯ ಪೋಲಿಸ್ ಚೆನ್ನನ ಸಿಂಹನಿಗೆ ಕೆನ್ನೆ ಪಕ್ಕ ಗುಂಡು ಸವರಿಕೊಂಡು ಹೋಗುವಂತೆ ಗೋಲಿ ಚಲಾಯಿಸಿದ ಚಂದ್ರಶೇಖರ ಅಜಾದ್ ಅಪ್ರತಿಮ ಗುರಿಕಾರ, ಆದರೆ ಭಾರತೀಯನನ್ನು, ದೇಶಬಾಂಧವನನ್ನು ಕೊಲ್ಲಬಾರದೆಂದು ಅವನು ಚೆನ್ನನ ಸಿಂಹನನ್ನು ಬೆದರಿಸಿದ. ನಮ್ಮ ಕ್ರಾಂತಿಕಾರಿಗಳ ಯುದ್ಧವೇನಿದ್ದರೂ ಬ್ರಿಟಿಷ್ ಅಧಿಕಾರಿಗಳ ವಿರುದ್ಧವಿತ್ತೇ ಹೊರತು ಅವರ ವಸತಿ ಪ್ರದೇಶಗಳಿಗೆ ನುಗ್ಗಿ ಸಾಮಾನ್ಯರನ್ನು ಕೊಲ್ಲುವುದರಲ್ಲಿ ಅವರೆಂದೂ ವಿಕಟಾನಂದ ಪಡೆಯಲಿಲ್ಲ. ಲಂಡನ್ನಿನ ಕಾಕ್ಸ್ಟನ್ ಹಾಲ್ ನಲ್ಲಿ ಡೈಯರ್ ನನ್ನು ಗುಂಡಿಕ್ಕಿ ಕೊಂದ ಉಧಮ್ ಸಿಂಗ್, ಸಭಾಂಗಣದಲ್ಲಿ ಬಿಳಿಯರೇ ತುಂಬಿದ್ದರೂ ಬೇರಾರನ್ನೂ ಕೊಲ್ಲಲಿಲ್ಲ, ಗಾಯಗೊಳಿಸಲಿಲ್ಲ. ಡೈಯರ್ ಸತ್ತದ್ದು ಖಚಿತವಾದ ಬಳಿಕ ಪಿಸ್ತೂಲನ್ನು ಒಪ್ಪಿಸಿ ಬಂಧನಕ್ಕೊಳಗಾದ. ಮಾನಸಿಕ ರೋಗಿಯೆಂಬ ನೆಪದಲ್ಲಿ ತಪ್ಪಿಸಿಕೊಳ್ಳೆಂಬ ಸೂಚನೆ ಬಂದಾಗ ನಿರಾಕರಿಸಿದ, ತಾನು ಪ್ರಜ್ಞಾಪೂರ್ವಕವಾಗಿಯೇ ಡೈಯರ್ ನನ್ನು ಕೊಂದುದಾಗಿ ಒಪ್ಪಿಕೊಂಡು ಹೆಮ್ಮೆಯಿಂದಲೇ ನೇಣುಗಂಬವೇರಿದ. ಎಲ್ಲಿಯೋ ಕೂತು, ಕಪ್ಪುಹಣದಲ್ಲಿ ಕೊಂಡು, ಹೊಂಚಿ, ಬಡವರು ತಿನ್ನುವ ಕ್ಯಾರಿಯರ್ ಗಳಲ್ಲಿ ಬಾಂಬುಗಳನ್ನು ಅಡಗಿಸಿಟ್ಟು ಸಾಮಾನ್ಯರನ್ನು ಕೊಂದ ಯಾಕೂಬ್ ಎಲ್ಲಿ, ನಮ್ಮ ಸ್ವಾತಂತ್ರ ವೀರರೆಲ್ಲಿ?! ಪದೇ ಪದೇ ಜೀವಭಿಕ್ಷೆ ಬೇಡುವ ಇವನೆಲ್ಲಿ, ನೇಣುಹಗ್ಗವನ್ನು ಚುಂಬಿಸಿ ಕೊರಳಿಗಿರಿಸಿಕೊಂಡ ಅವರೆಲ್ಲಿ?!

ಯಾಕೂಬನಿಗೆ ಜೈ ಎನ್ನುವ ಬೇವಕೂಫಿತನ ಮಾಡುವ ಮುನ್ನ ಯೋಚಿಸುವುದುಚಿತ.

No comments:

Post a Comment