Saturday, 31 January 2015

ಕಾಪಿ ಹೊಡೆದುಬಿಡಬೇಕಿತ್ತು ಮೋಹನ........

ಕಾಪಿ ಹೊಡೆದುಬಿಡಬೇಕಿತ್ತು ಮೋಹನ
ನೀನಂದು ಪದಗೆಡಿಸಿದ ‘ಕೆಟ್ಟಲ್’
ಇಂದು ಹದಗೆಡಿಸಿದೆ ದೇಶವನು
ಎಲ್ಲ ಚಹಪಾತ್ರೆಗಳಿಂದು
ಉಳಿದ ಪಾತ್ರೆಗಳು ಮಸಿಯೆನ್ನುತ್ತಿವೆ
ನೀನಂದು ಅನುಸರಿಸಲಿಲ್ಲ
ಮಾಸ್ತರರ ಕಣ್ಸನ್ನೆಯನು
ಕಣ್ಣಮುಚ್ಚಿದೆ
ದಗಾಕೋರರ ನಡೆಗಳಿಗೆ
ಅಂದಿನ ನಿನ್ನ ಮುಗ್ಧ ನಕಲು
ಉಳಿಸಬಹುದಿತ್ತು ದೇಶವನ್ನು
ಇಂದಿನ ಡಾಂಭಿಕತನದಿಂದ
ನೀನು ಕಾಪಿ ಹೊಡೆದುಬಿಡಬೇಕಿತ್ತು ಮೋಹನ...........

ಒಂದು ಸಣ್ಣ ಸುಳ್ಳು
ಸಹಿಸಲಾರೆ ನೀನು ಬಾಪು
ನೀನೇ ಬಿತ್ತಿದ ತತ್ತ್ವಗಳ ಹೆಸರಿನಲಿ
ಮಾರಾಟಕ್ಕಿದೆ ದೇಶ
ಸತ್ಯ ಮತ್ತು ಅಹಿಂಸೆ
ಸಿಂಹದ ಮಿಯಾಂವ್ ಒಂದೆಡೆ
ಮತ್ತೊಂದೆಡೆ ನಿನ್ನ ಚಿತ್ರ
ಮಧ್ಯದಲಿ ಹಾಯುವ
ಬೆಳ್ಳಿಯ ರೇಖೆ
“ ಇವರಿಗೆ ನಾನು ಈ
ಮೊತ್ತವನ್ನು ನೀಡುತ್ತಿದ್ದೇನೆ ”
ನಿತ್ಯ ಏರಿಳಿಯುವ ಮೊತ್ತ
ನೀನು ಕಾಪಿ ಹೊಡೆದುಬಿಡಬೇಕಿತ್ತು ಮೋಹನ...........

ಪದದೊಳಗಿನ ‘ಟಿ’ ಒಂದಕ್ಷರ
ಅಷ್ಟೊಂದು ಮುಖ್ಯವಾಯಿತೆ
ನಿನಗೆ ಬಾಪು?
ನಿನ್ನ ಟೋಪಿ ಧರಿಸಿದ
ಜನರಿಂದ ಇಂದು ಚಣದಲ್ಲಿ
ನೀನೊಂದು ಟೀ
ಕುಡಿಯುವುದರೊಳಗೆ
ದಾಖಲೆಗಳ ಏರುಪೇರು
ನೀನದನು ಬರೆದು
ಅನುಭವಿಸಬಹುದಾಗಿದ್ದ
ಪಾಪಪ್ರಜ್ಞೆಗಿಂತ ಬಲುಭಾರ
ನೀನು ಕಳೆದ ಒಂದು ‘ಟಿ’ ಯ ಬೆಲೆ
ನೀನು ಕಾಪಿ ಹೊಡೆದುಬಿಡಬೇಕಿತ್ತು ಮೋಹನ...........

ಬ್ರಹ್ಮಚರ್ಯೆಯ ವ್ರತದ ಒರೆಗಲ್ಲೆಂದು
ಅವರೊಂದಿಗೆ ಬೆತ್ತಲೆ ಮಲಗಿದೆಯಲ್ಲವೆ
ಫಕೀರ?
ಆಯಿತೆ ನಿನ್ನುದ್ರೇಕದ ಪರೀಕ್ಷೆ?
ಭಳಿರೇ ಭಾಪು!
ನೀನು ಪಾಸಾದೆಯಾ ಮಹಾತ್ಮ?
ನಿನ್ನನೇಕೆ ಕೇಳಲಿ?
ಕೇಳಬೇಕು ಆ ಕಿಶೋರಿಯರನ್ನು
ಬಾಪು, ಇದನ್ನೇ
ಪತ್ನಿಯರು ಮಾಡಿದರೆ
ನೀನದನ್ನು ಪುರಸ್ಕರಿಸುವೆಯಾ?
ನೀನು ಕಾಪಿ ಹೊಡೆದುಬಿಡಬೇಕಿತ್ತು ಮೋಹನ...........

ಸ್ವದೇಶಿ, ಬಾಪು?
ಆದರೆ ನಿನ್ನ ರೂಪುಳ್ಳವನ್ನು
ಕಂತೆಕಟ್ಟಿ ಸ್ವಿಸ್ ಬ್ಯಾಂಕ್ ಗಳಲ್ಲಿ
ಜಮಾಯಿಸಿದ್ದಾರೆ
ಪಾಕಿಸ್ತಾನ ಹೊಲಿಯುತ್ತಿದೆ
ಚರ್ಮಚೀಲಗಳನ್ನು
ಚೀಣವೋ ಬಹಳ ಅಲ್ಪ
ನಾಯಕರು ವಿಹರಿಸುವರು
ವಿಹಾರಧಾಮಗಳಲಿ
ನಾಗರಿಕರು ಬೇಯುವರು
ಬಿಸಿಲ ಬೇಗೆಯಲಿ
ನಮಗಾಗಿ ಬೆತ್ತಲಾದೆ ನೀನು
ಅವರಿಗಾಗಿ ಬೆತ್ತಲಾಗಿಸುತ್ತಿದ್ದಾರೆ
ನಮ್ಮನು
ಕಾಪಿ ಹೊಡೆದುಬಿಡಬೇಕಿತ್ತು
ಗಾಂಧಿ ನೀನು
ಭೂತದ ಪಾಪಪ್ರಜ್ಞೆಯಿಂದ
ಬಿಡುಗಡೆ ಪಡೆಯಲು
ಅಲ್ಲ......
ಭವಿಷ್ಯದ ಹಿತದೃಷ್ಟಿಯಿಂದ
ನೀನು ಕಾಪಿ ಹೊಡೆದುಬಿಡಬೇಕಿತ್ತು ಮೋಹನ...........
ನೀನು ಕಾಪಿ ಹೊಡೆದುಬಿಡಬೇಕಿತ್ತು ಮೋಹನ...........

No comments:

Post a Comment